Home ಟಾಪ್ ಸುದ್ದಿಗಳು ಅನರ್ಹತೆಯ ಬಲೆಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ

ಅನರ್ಹತೆಯ ಬಲೆಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ

ರಾಂಚಿ: ಜಾರ್ಖಂಡ್ ರಾಜ್ಯಪಾಲರ ವರದಿಯಂತೆ ಚುನಾವಣಾ ನೀತಿ ಉಲ್ಲಂಘನೆ ಆರೋಪ ಎದುರಿಸುತ್ತಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ರನ್ನು ಚುನಾವಣಾ ಆಯೋಗವು ಅನರ್ಹಗೊಳಿಸುವರೇ ಎಂಬ ಪ್ರಶ್ನೆಯೀಗ ಎದ್ದಿದೆ.

ಜೆಎಂಎಂ- ಕಾಂಗ್ರೆಸ್ ಮೈತ್ರಿ ಸರಕಾರವು ಮುಂದುವರಿಯುವುದು ಎಂದು ಅದರ ನಾಯಕರು ಹೇಳಿದ್ದರೂ ಬಿಜೆಪಿಯು ಕೂಡಲೆ ಮಧ್ಯಂತರ ಚುನಾವಣೆ ನಡೆಸಲು ಒತ್ತಾಯಿಸುತ್ತಿರುವುದು ಈ ಗೊಂದಲಕ್ಕೆ ಕಾರಣವಾಗಿದೆ.

“ನೀವು ಸಾಂವಿಧಾನಿಕ ಸಂಸ್ಥೆಗಳನ್ನು ಖರೀದಿಸಬಹುದು. ಆದರೆ ಜನರನ್ನು ಖರೀದಿಸುವುದು ಸಾಧ್ಯವಿಲ್ಲ. ಬಿಜೆಪಿ ಅದರ ಸಂಸದರು, ಕೈಗೊಂಬೆ ಪತ್ರಕರ್ತರು, ರಾಜ್ಯಪಾಲರ ಜೊತೆ ಕುಳಿತುಕೊಂಡು ಚುನಾವಣಾ ಆಯೋಗಕ್ಕೆ ಕರಡು ಮಾಡಿ ಕಳುಹಿಸಿದ್ದಾರೆ” ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಟ್ವೀಟಿದ್ದಾರೆ. ಅಲ್ಲದೆ ಚುನಾವಣೆಗೂ ಸಿದ್ಧ ಎಂದಿದ್ದಾರೆ.

ಗಣಿ ಗುತ್ತಿಗೆಯಲ್ಲಿ ಮುಖ್ಯಮಂತ್ರಿ ಆಸ್ತಿ ಮಾಡಿದ್ದಾರೆ ಎಂಬುದರ ಮೇಲೆ ಮುಖ್ಯಮಂತ್ರಿಯನ್ನು ಅನರ್ಹಗೊಳಿಸಬೇಕು ಎನ್ನುವುದು ಬಿಜೆಪಿಯ ಕೂಗು. ಜಾರ್ಖಂಡ್ ಮುಕ್ತಿ ಮೋರ್ಚಾ ಇದು ಬಿಜೆಪಿಯ ಒಳ ವ್ಯವಹಾರ ಎಂದು ಟೀಕಿಸಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅಲಾಂಗೀರ್ ಆಲಂ ಅವರು “ಹೇಮಂತ್ ಸೊರೇನ್ ಮುಂದುವರಿದೇ ಮುಂದುವರಿಯುತ್ತಾರೆ. ಒಂದೊಮ್ಮೆ ಹಾಗಾಗದಿದ್ದರೆ ಸೋರೆನ್ ಬದಲು ಜೆಎಂಎಂ ಹೇಳಿದವರನ್ನೇ ಮುಖ್ಯಮಂತ್ರಿಯಾಗಿ ಕೂರಿಸಲಾಗುವುದು ಇಲ್ಲವೇ ಸೊರೇನ್ ಅವರು ಮತ್ತೆ ಸ್ಪರ್ಧಿಸಿ ಮರು ಪ್ರಮಾಣವಚನ ಸ್ವೀಕರಿಸುತ್ತಾರೆ. ರಾಜ್ಯಪಾಲರ ವರದಿ ಏನು ಬರುತ್ತದೋ ನೋಡೋಣ ಎಂದು ಹೇಳಿದರು.

82 ಸದಸ್ಯ ಬಲದ ಜಾರ್ಖಂಡ್ ವಿಧಾನ ಸಭೆಯಲ್ಲಿ ಜೆಎಂಎಂ 30, ಕಾಂಗ್ರೆಸ್ 17 ಎಂದು 47 ಸದಸ್ಯ ಬಲವನ್ನು ಹೊಂದಿದೆ. ಬಿಜೆಪಿಯು 25 ಸದಸ್ಯ ಬಲ ಹೊಂದಿದೆ. ಸದ್ಯ ಇತರರು ಆಳುವ ಕೂಟದ ಜೊತೆಗೆ ಇದ್ದಾರೆ ಎಂದು ವರದಿ ತಿಳಿಸಿದೆ.

ಜೆಎಂಎಂ ಶಾಸಕರು ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ 50 ಲಕ್ಷ ರೂಪಾಯಿ ನಗದು ಜೊತೆಗೆ ಸಿಕ್ಕಿ ಬಿದ್ದಿದ್ದರು. ಬಿಜೆಪಿಯು ಹಣ ಕೊಟ್ಟು ಶಾಸಕರ ಖರೀದಿಯಲ್ಲಿ ತೊಡಗಿರುವುದು ಆಗಿನಿಂದಲೂ ಸ್ಪಷ್ಟವಾಗಿದೆ. ಬಿಜೆಪಿ ಆ ಆರೋಪ ಅಲ್ಲಗಳೆಯುತ್ತ, ಈ ಸರಕಾರವು ಭ್ರಷ್ಟಾಚಾರದ್ದು ಎಂದು ಆರೋಪಿಸುತ್ತಿದೆ.

ಸರಕಾರದೊಂದಿಗೆ ವ್ಯವಹಾರ ಮಾಡಿ ಸೊರೇನ್ ರು ಜನಪ್ರತಿನಿಧಿ ಕಾಯ್ದೆಯ 9ಎ ವಿಧಿಯನ್ನು ಮೀರಿದ್ದಾರೆ ಎಂದು ಅರೋಪಿಸಿ ಬಿಜೆಪಿ ರಾಜ್ಯಪಾಲರರಿಗೆ ದೂರು ನೀಡಿತ್ತು. ರಾಜ್ಯಪಾಲರು ಈ ಬಗೆಗೆ ಚುನಾವಣಾ ಆಯೋಗಕ್ಕೆ ವರದಿ ನೀಡಿದ್ದು,192ನೇ ವಿಧಿಯನ್ವಯ ಅನರ್ಹತೆಯ ವಿಷಯವನ್ನು ಪರಿಗಣಿಸಬಹುದು ರಾಜಭವನದ ಮೂಲಗಳು ಹೇಳಿವೆ.

ಕಳೆದ ನಾಲ್ಕು ದಿನಗಳಿಂದ ಅನರ್ಹತೆಯ ಬಗೆಗೆ ಒಳಗೊಳಗೇ ಜೋರಾಗಿ ಕೆಲಸ ನಡೆದಿದೆ ಎನ್ನಲಾಗಿದೆ. ಆಗಸ್ಟ್ 12ರಂದೇ ಹೇಮಂತ್ ಸೊರೇನ್ ತಮ್ಮ ವಾದವನ್ನು ಚುನಾವಣಾ ಆಯೋಗದೆದುರು ಮಂಡಿಸಿದ್ದಾರೆ. ಈ ಸೋಮವಾರ ಚುನಾವಣಾ ಆಯೋಗವು ಬಿಜೆಪಿಯ ವಾದ ಮೊದಲಾದವನ್ನು ಕೇಳಿ ಮುಗಿಸಿದೆ. ಆಗಸ್ಟ್ 18ರಂದು ಎರಡೂ ಕಡೆಯವರು ತಮ್ಮ ಲಿಖಿತ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

ಮಂಗಳವಾರ ಚುನಾವಣಾ ಆಯೋಗವು ರಾಜ್ಯಪಾಲ ರಮೇಶ್ ಬಯಾಸ್ ರಿಗೆ ತನ್ನ ಅಭಿಪ್ರಾಯ ರವಾನಿಸಿದ್ದು, ರಾಜ ಭವನ ಅದನ್ನು ಸ್ವೀಕರಿಸಿದೆ. ಅಲ್ಲಿನ ಎಲ್ಲ ಪತ್ರಿಕೆಗಳೂ, ಸೊರೇನ್ ಮನೆಗೆ ಎಂದು ಬರೆದಿರುವುದಾಗಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಆದರೆ, ಈ ವಿಚಾರವಾಗಿ ರಾಜಭವನ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿಲ್ಲ. ರಾಂಚಿ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲರನ್ನು ಪತ್ರಕರ್ತರು ಪ್ರಶ್ನಿಸಿದ್ದು, ರಾಜಭವನ ತಲುಪಿ ಪರಿಸ್ಥಿತಿ ಅವಲೋಕಿಸದೆ ಏನೂ ಹೇಳಲಾಗದು ಎಂದು ಉತ್ತರಿಸಿದ್ದಾರೆ.

.

Join Whatsapp
Exit mobile version