Home ಟಾಪ್ ಸುದ್ದಿಗಳು ಲಜ್ಜೆಗೆಟ್ಟ ಸರ್ಕಾರಕ್ಕೆ ಆತ್ಮಸಾಕ್ಷಿ ಇಲ್ಲದ ಆರೋಗ್ಯ ಸಚಿವ: ಜೆಡಿಎಸ್ ವಾಗ್ದಾಳಿ

ಲಜ್ಜೆಗೆಟ್ಟ ಸರ್ಕಾರಕ್ಕೆ ಆತ್ಮಸಾಕ್ಷಿ ಇಲ್ಲದ ಆರೋಗ್ಯ ಸಚಿವ: ಜೆಡಿಎಸ್ ವಾಗ್ದಾಳಿ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ಆ್ಯಂಬುಲೆನ್ಸ್ ಸೇವೆ ಅಸ್ತವ್ಯಸ್ತವಾಗಿದ್ದು, ಆ್ಯಂಬುಲೆನ್ಸ್ ಸೇವೆ ಸರಿಯಾಗಿ ದೊರೆಯದೆ ಜನರು ಪರದಾಡುತ್ತಿದ್ದಾರೆ. ಜನರ ಪ್ರಾಣ ರಕ್ಷಣೆ ಇಷ್ಟು ಲಘುವಾದ ವಿಷಯವೆ? ಲಜ್ಜೆಗೆಟ್ಟ ಸರ್ಕಾರಕ್ಕೆ ಆತ್ಮಸಾಕ್ಷಿ ಇಲ್ಲದ ಆರೋಗ್ಯ ಸಚಿವ ಎಂಬಂತಾಗಿದೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಜೆಡಿಎಸ್, “ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೊಡ್ಡಬಳ್ಳಾಪುರದಲ್ಲಿ ಆ್ಯಂಬುಲೆನ್ಸ್ ಸೇವೆ ಅಸ್ತವ್ಯಸ್ತವಾಗಿದ್ದು, ತುರ್ತು ಚಿಕಿತ್ಸೆಗಾಗಿ ಜನ ಪರದಾಡುವ ಸ್ಥಿತಿ ಎದುರಾಗಿದೆ. ರಾಜ್ಯ ಆರೋಗ್ಯ ಸಚಿವ, ‘ಮೋಜುಗಾರ-ಸೊಗಸುಗಾರ’ ಡಾ.ಕೆ.ಸುಧಾಕರ್ ಅವರೇ, ಉತ್ಸವಗಳನ್ನು ಮಾಡಲು ಸಮಯ-ಶಕ್ತಿ ಮೀಸಲಿಟ್ಟು, ಆರೋಗ್ಯ ಸೇವೆ ಮರೆತಿದ್ದೀರಿ” ಎಂದು ಹೇಳಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರೂ ತಾವೇ ಆಗಿರುವಾಗ, ಆ್ಯಂಬುಲೆನ್ಸ್ ಸೇವೆ ಸರಿಯಾಗಿ ದೊರೆಯದೇ ಇರುವುದು ದುರಂತವಲ್ಲದೆ ಇನ್ನೇನು? ರಾಜ್ಯದ ‘ಪ್ರಭಾವಿ’ ಸಚಿವರಾಗಿ ಕನಿಷ್ಠ ಆರೋಗ್ಯ ಸೇವೆ ಒದಗಿಸಲು ಸಾಧ್ಯವಿಲ್ಲದಿರುವುದು ನಾಚಿಕೆಗೇಡು. ರಾಜ್ಯ ಬಿಜೆಪಿ ಸರ್ಕಾರಕ್ಕಂತೂ ಮರ್ಯಾದೆ ಇಲ್ಲ” ಎಂದು ಜನತಾದಳ ವಾಗ್ದಾಳಿ ನಡೆಸಿದೆ.

“ವಾರದ ಹಿಂದೆ ದೊಡ್ಡವೆಂಗಲದಲ್ಲಿ ನಡೆದ ಜೋಡಿ ಕೊಲೆ ಸಂದರ್ಭದಲ್ಲಿ ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್ ಸೇವೆ ದೊರೆತಿದ್ದರೆ ಚಾಕು ಇರಿತಕ್ಕೆ ಒಳಗಾದವರನ್ನು ಉಳಿಸಿಕೊಳ್ಳಬಹುದಿತ್ತು. ಇದು ಸೇರಿ ತಾಲ್ಲೂಕಿನಲ್ಲಿ ಆ್ಯಂಬುಲೆನ್ಸ್ ಸೇವೆ ಇದ್ದೂ ಇಲ್ಲದಂತಾಗಿರುವುದು ಆರೋಗ್ಯ ಸಚಿವಾಯಲದ ನಿಷ್ಕ್ರಿಯತೆ ಎದ್ದು ಕಾಣುವಂತಿದೆ. ಇದ್ದ ಆ್ಯಂಬುಲೆನ್ಸ್​ಗಳಲ್ಲಿ ಕೆಲವು ದುರಸ್ತಿಗಾಗಿ ಗ್ಯಾರೇಜ್ ಸೇರಿದ್ದವು. ತಿಂಗಳುಗಳ ನಂತರವೂ ಅವೆಲ್ಲ ಸೇವೆಗೆ ವಾಪಸ್ಸಾಗಿಲ್ಲ. ಈ ಸಂಗತಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ನೌಕರರೇ ತಿಳಿಸಿದ್ದಾರೆ. ಜನರ ಪ್ರಾಣ ರಕ್ಷಣೆ ಇಷ್ಟು ಲಘುವಾದ ವಿಷಯವೆ? ಲಜ್ಜೆಗೆಟ್ಟ ಸರ್ಕಾರಕ್ಕೆ ಆತ್ಮಸಾಕ್ಷಿ ಇಲ್ಲದ ಆರೋಗ್ಯ ಸಚಿವ ಎಂಬಂತಾಗಿದೆ” ಎಂದು ಸಚಿವ ಸುಧಾಕರ್ ವಿರುದ್ಧ ಜೆಡಿಎಸ್ ಟೀಕಾಪ್ರಹಾರ ನಡೆಸಿದೆ.

Join Whatsapp
Exit mobile version