Home ಕರಾವಳಿ ಅಗತ್ಯ ವಸ್ತುಗಳ ಮೇಲಿನ ಜಿಎಸ್ ಟಿ ಹೆಚ್ಚಳ ವಿರುದ್ಧ ಜೆಡಿಎಸ್ ನಿಂದ ಪ್ರತಿಭಟನೆ: ಮುಹಮ್ಮದ್ ಕುಂಞಿ

ಅಗತ್ಯ ವಸ್ತುಗಳ ಮೇಲಿನ ಜಿಎಸ್ ಟಿ ಹೆಚ್ಚಳ ವಿರುದ್ಧ ಜೆಡಿಎಸ್ ನಿಂದ ಪ್ರತಿಭಟನೆ: ಮುಹಮ್ಮದ್ ಕುಂಞಿ

ಮಂಗಳೂರು: ಹಿಂದೆ ಕಬ್ಬಿಣ, ಉಕ್ಕು, ಸಿಮೆಂಟ್ ಸಹಿತ ದೊಡ್ಡ ವಸ್ತುಗಳಿಗೆ ಜಿಎಸ್ ಟಿ ಹಾಕುತ್ತಿದ್ದರು. ಈಗ ಬಿಜೆಪಿ ಸರಕಾರವು ಮಜ್ಜಿಗೆಯನ್ನು ಕೂಡ ಬಿಡದೆ ಜಿಎಸ್ ಟಿ ಹಾಕಿದ್ದು ಜನರೆಲ್ಲ ಛೀ ಥೂ ಎನ್ನುವಂತಾಗಿದೆ ಎಂದು ಜಿಲ್ಲಾ ಜನತಾ ಮುಖ್ಯಸ್ಥ ಮುಹಮ್ಮದ್ ಕುಂಞಿ ಟೀಕಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು ಹೆಣ ಸುಡುವ ಕಟ್ಟಿಗೆಗೂ ಜಿಎಸ್ ಟಿ ಹಾಕುತ್ತಾರೆ. ಮೋದಿ ಸರಕಾರದ ಈ ಅಚ್ಛೇ ದಿನವನ್ನು ಎಲ್ಲ ಕಡೆ ಖಂಡಿಸಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಪಕ್ಷ ಕೈಗೊಂಡ ನಿರ್ಣಯದಂತೆ ಜಿಲ್ಲೆಯಲ್ಲೂ ನಾವು ಪ್ರತಿಭಟಿಸುವುದಾಗಿ ಮುಹಮ್ಮದ್ ಕುಂಞಿ ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಅವರು ಇನ್ನು ಎರಡು ವರ್ಷಗಳಲ್ಲಿ ಮಂಗಳೂರು ಹೊಳೆಯುತ್ತದೆ ಎಂದಿದ್ದರು. ಆದರೆ ಇಡೀ ಮಂಗಳೂರು ಹೊಂಡ ಗುಂಡಿಗಳಿಂದ ನರಳುತ್ತಿದೆ. ಸದ್ಯವೇ ಈ ವಾರ ಜಿಲ್ಲೆಯ ಎಲ್ಲ ಕಡೆ ಜಿಎಸ್ ಟಿ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ. ಮುಖ್ಯಮಂತ್ರಿ ಬೊಮ್ಮಾಯಿಯವರು, ಬಿಜೆಪಿ ಅಧ್ಯಕ್ಷ ಕಟೀಲ್ ಕೋಟಿ ರೂಪಾಯಿ ಮಾತನಾಡುತ್ತಾರೆ. ಆದರೆ ಜನರಿಗೆ ಐದು ಪೈಸೆಯ ಕೆಲಸ ಮಾಡಿಲ್ಲ ಎಂದು ಹರಿಹಾಯ್ದರು.


ಕುಮಾರಸ್ವಾಮಿ ಜಿಲ್ಲೆಗೆ ಬರಲಿದ್ದಾರೆ. ನಾವು ಮತ್ತೆ ಇಲ್ಲಿ ಪಕ್ಷ ಸಂಘಟಿಸುವುದಾಗಿ ಅವರು ಹೇಳಿದರು.
ಪಕ್ಷದ ಮುಖಂಡ ನೊರೊನ್ಹಾ ಮಾತನಾಡಿ, ಮಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ನೀರಿನ ದರ ದುಪ್ಪಟ್ಟು ಏರಿಸಿದ್ದಾರೆ. ಈಗ ಕಡಿಮೆ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಇದು ತಾಂತ್ರಿಕ ಮೋಸ ಎಂದು ಹೇಳಿದರು.
ಮರ್ತೋರ್ವ ಮುಂಖಂಡ ವಸಂತ ಪೂಜಾರಿ ಮಾತನಾಡಿ, ಪಡೀಲಿನಿಂದ ಪಂಪ್ ವೆಲ್ ವರೆಗೆ ರಸ್ತೆ ಅಗಲ ಕೆಲಸ ಆರಂಭಿಸಿದ್ದಾರೆ. ಆದರೆ ಬಿಲ್ಡರ್ ಗಳ ಜೊತೆಗೆ ಸೇರಿಕೊಂಡು ಸ್ಮಾರ್ಟ್ ಸಿಟಿ ಹೆಸರಿನಲ್ಲಿ 1,450 ಕೋಟಿ ದರೋಡೆ ಮಾಡಲಾಗುತ್ತಿದೆ. ಇದರ ವಿರುದ್ಧ ಜನರು ಮೌನ ಮುರಿಯಬೇಕು ಎಂದು ಹೇಳಿದರು.


ಪತ್ರಿಕಾಗೋಷ್ಠಿಯ ಪಕ್ಷದ ಮುಖಂಡರಾದ ರಮೀಝಾ ನಾಸಿರ್, ವಸಂತ ಪೂಜಾರಿ, ಸುಶೀಲ್ ನೊರೊನ್ಹಾ, ಪ್ರವೀಣ ಚಂದ್ರ ಜೈನ್ ಮೊದಲಾದವರು ಉಪಸ್ಥಿತರಿದ್ದರು.

Join Whatsapp
Exit mobile version