Home ಟಾಪ್ ಸುದ್ದಿಗಳು ನೀರಾವರಿ ಯೋಜನೆಗಳಿಗೆ ಶೀಘ್ರ ಅನುಮೋದನೆಗೆ ಒತ್ತಾಯಿಸಿ ಜೆಡಿಎಸ್ ನಿಂದ ರಾಜಭವನಕ್ಕೆ ಪಾದಯಾತ್ರೆ

ನೀರಾವರಿ ಯೋಜನೆಗಳಿಗೆ ಶೀಘ್ರ ಅನುಮೋದನೆಗೆ ಒತ್ತಾಯಿಸಿ ಜೆಡಿಎಸ್ ನಿಂದ ರಾಜಭವನಕ್ಕೆ ಪಾದಯಾತ್ರೆ

ಬೆಂಗಳೂರು, ಜು.29: ರಾಜ್ಯದ ನೀರಾವರಿ ಯೋಜನೆಗಳ ಸಂಬಂಧ ತಾರತಮ್ಯ ಮಾಡದೇ ಕೂಡಲೇ ಅಗತ್ಯ ಅನುಮೋದನೆ ನೀಡುವಂತೆ ಆಗ್ರಹಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಶಾಸಕರು ವಿಧಾನಸೌಧದಿಂದ ರಾಜಭವನಕ್ಕೆ ಪಾದಯಾತ್ರೆ ಮೂಲಕ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಮಾತನಾಡಿ, ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯದ ನದಿ ವಿಚಾರದಲ್ಲಿ ಕೇಂದ್ರದ ತಾರತಮ್ಯದ ಬಗ್ಗೆ ಮನವಿ ಸಲ್ಲಿಸಲಿದ್ದೇವೆ. ತಮಿಳುನಾಡಿಗೆ ಕೇಂದ್ರ ಸರ್ಕಾರ ರಾಜ್ಯದ ಹೆಚ್ಚುವರಿ ನೀರನ್ನು ಉಪಯೋಗಿಸಲು ಅವಕಾಶ ನೀಡಿದೆ. ಮಹದಾಯಿ ಯೋಜನೆಯ ಕುರಿತಾದ ಪ್ರಾಧಿಕಾರದ ತೀರ್ಪಿನ ಹಿನ್ನೆಲೆಯಲ್ಲಿ ಗೆಜೆಟ್ ನೋಟಿಫಿಕೇಷನ್ ಮಾಡಲು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ನಲ್ಲಿರುವ ಅರ್ಜಿಯ ಕಾರಣ ಕೊಡುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಡಿಯಲ್ಲಿ ರಾಜ್ಯಕ್ಕೆ ಹಂಚಿಕೆಯಾಗಿರುವ 130 ಟಿಎಂಸಿ ನೀರು ಉಪಯೋಗ ಮಾಡಲು ಗೆಜೆಟ್ ನೋಟಿಫಿಕೇಷನ್ ಮಾಡಲು ಸುಪ್ರೀಂಕೋರ್ಟ್ನಲ್ಲಿ ತೆಲಂಗಾಣದ ಅರ್ಜಿಯ ಸಬೂಬು ನೀಡಿ ನೀರನ್ನು ಉಪಯೋಗ ಮಾಡಲು ಅವಕಾಶ ತಡೆ ಹಿಡಿಯಲಾಗಿದೆ ಎಂದು ಆರೋಪಿಸಿದರು.

ಈ ಎಲ್ಲ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಿದ್ದೇವೆ. ಎರಡನೇ ಹಂತದಲ್ಲಿ ದೇವೇಗೌಡರ ನೇತೃತ್ವದಲ್ಲಿ ಪ್ರಧಾನಿ ಭೇಟಿ ಮಾಡಿ ಈ ಸಂಬಂಧ ಮನವಿ ಮಾಡಲಾಗುವುದು. ಈ ಮೂಲಕ ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸಲಾಗುವುದು. ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಈ ಕುರಿತಾದ ಅರಿವು ಇದೆ. ಪ್ರಧಾನ ಮಂತ್ರಿ ಮೋದಿ ಹಾಗೂ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಅಗತ್ಯ ಅನುಮತಿ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

Join Whatsapp
Exit mobile version