Home ಜಾಲತಾಣದಿಂದ 2B ಅಡಿಯಲ್ಲೇ ಮುಸ್ಲಿಮರಿಗೆ ಮತ್ತೆ ಮೀಸಲಾತಿ: ಜೆಡಿಎಸ್ ಭರವಸೆ

2B ಅಡಿಯಲ್ಲೇ ಮುಸ್ಲಿಮರಿಗೆ ಮತ್ತೆ ಮೀಸಲಾತಿ: ಜೆಡಿಎಸ್ ಭರವಸೆ

►ಜೆಡಿಎಸ್ ಜನತಾ ಪ್ರಣಾಳಿಕೆ ಬಿಡುಗಡೆ

ಬೆಂಗಳೂರು: ಮಹತ್ವಾಕಾಂಕ್ಷೆಯ ಪಂಚರತ್ನ ಯೋಜನೆಗಳ ಜಾರಿ, ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಕ್ಷಿಪ್ರಗತಿಯ ಅನುಷ್ಠಾನ ಸೇರಿದಂತೆ ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಿರುವ ಜೆಡಿಎಸ್ ಪಕ್ಷವು, ಜನತಾ ಪ್ರಣಾಳಿಕೆ ಬಿಡುಗಡೆಗೊಳಿಸಿದೆ.

ಪ್ರಸಕ್ತ ಕರ್ನಾಟಕ ವಿಧಾನಸಭೆ ಚುನಾವಣೆಯ ಜೆಡಿಎಸ್ ಪ್ರಣಾಳಿಕೆ ಜನತಾ ಪ್ರಣಾಳಿಕೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪ್ರಣಾಳಿಕೆ ರಚನೆ ಸಮಿತಿ ಅಧ್ಯಕ್ಷ ಬಿಎಂ ಫಾರೂಕ್ ಹಾಗೂ ಸಮಿತಿ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ ಅವರು ಇಂದು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಬಿಡುಗಡೆ ಮಾಡಿದರು.

ವರ್ಷಕ್ಕೆ 5 ಸಿಲಿಂಡರ್ ಉಚಿತ, ಸ್ತ್ರೀಶಕ್ತಿ ಸಾಲ ಮನ್ನಾ, ಕನ್ನಡಕ್ಕೆ ಅಗ್ರ ಮನ್ನಣೆ, ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರ ಉದ್ಯೋಗಕ್ಕೆ ಮೀಸಲು, ವಕೀಲರ ರಕ್ಷಣೆಗೆ ಕಾಯಿದೆ, ರಾಜ್ಯದಲ್ಲಿ ನಿಮ್ಹಾನ್ಸ್ ಮಾದರಿ ಆಸ್ಪತ್ರೆ, ಬೋನ್ ಮ್ಯಾರೊ ಸೇರಿ ದುಬಾರಿ ಕಾಯಿಲೆಗಳಿಗೆ 25 ಲಕ್ಷ ರೂ.ವರೆಗೆ ಪರಿಹಾರ, ನ್ಯಾ.ಸಾಚರ್ ವರದಿ ಜಾರಿಗೆ ಕ್ರಮ, ಪೊಲೀಸರ ವೇತನ ತಾರತಮ್ಯ ನಿವಾರಣೆ, ವಿಕಲಚೇತನರ ಪಿಂಚಣಿ 2500, ಹಿರಿಯ ಪಿಂಚಣಿ 5000 ರೂ.ಗಳಿಗೆ ಏರಿಕೆ ಸೇರಿದಂತೆ ಹಲವಾರು ಪ್ರಮುಖ ಘೋಷಣೆಗಳನ್ನು ಪಕ್ಷ ಮಾಡಿದೆ.

ಅಲ್ಲದೆ, ಪಂಚರತ್ನ ಯೋಜನೆಗಳಾದ ಎಲ್ಲರಿಗೂ ಸಮಾನ ಆರೋಗ್ಯ ಸೌಲಭ್ಯ ಆರೋಗ್ಯ ಸಂಪತ್ತು, ಸಮಾನ ಶಿಕ್ಷಣ ಕೊಡುವ ಶಿಕ್ಷಣವೇ ಆಧುನಿಕ ಶಕ್ತಿ, ಕೃಷಿಗೆ ಆಧುನಿಕ ಕಾಯಕಲ್ಪ ನೀಡುವ ರೈತ ಚೈತನ್ಯ, ಉಚಿತ ಮನೆ ನೀಡುವ ವಸತಿ ಆಸರೆ, ಯುವಕರು ಹಾಗೂ ಮಹಿಳೆಯರ ಸಾಮಾಜಿಕ ಭದ್ರತೆ, ಆರ್ಥಿಕ ಸಬಲೀಕರಣಕ್ಕೆ ರೂಪಿಸಲಾಗಿರುವ ಯುವನವ ಮಾರ್ಗ – ಮಹಿಳಾ ಸಬಲೀಕರಣ ಯೋಜನೆಗಳನ್ನು ಜಾರಿ ಮಾಡುವುದಾಗಿ ಪಕ್ಷ ಘೋಷಣೆ ಮಾಡಿದೆ.

ಜನತಾ ಪರ್ವದ ಅಡಿಯಲ್ಲಿ ರೂಪಿಸಿ, ರಾಜ್ಯದ ಉದ್ದಗಲಕ್ಕೂ ಕೈಗೊಂಡ ಜನತಾ ಜಲಧಾರೆ, ಪಂಚರತ್ನ ರಥಯಾತ್ರೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಸಂಗ್ರಹ ಮಾಡಲಾದ ಜನರ ಅಪೇಕ್ಷೆ ಹಾಗೂ ಸಲಹೆಗಳ ಆಧಾರದಲ್ಲಿ ಜನತಾ ಪ್ರಣಾಳಿಕೆ ರಚನೆ ಮಾಡಲಾಗಿದೆ ಎಂದು ಪಕ್ಷ ಹೇಳಿದೆ.

ಮೀಸಲಾಗಿ ಗೊಂದಲ ನಿವಾರಣೆ:
ಮುಸ್ಲಿಮರಿಗೆ ಶೈಕ್ಷಣಿಕವಾಗಿ ಆರ್ಥಿಕವಾಗಿ ಮುಂದುವರಿಯಲು ಹೆಚ್.ಡಿ.ದೇವೆಗೌಡರ ಕಾಲದಲ್ಲಿ ಶೇ.4ರಷ್ಟು ಮೀಸಲು ನೀಡಲಾಗಿತ್ತು. ಅದನ್ನು ಬಿಜೆಪಿ ಸರಕಾರ ಏಕಾಏಕಿ ಹಿಂಪಡೆದಿದೆ. ಆ ಮೀಸಲು ವ್ಯವಸ್ಥೆಯನ್ನು ಮರು ಜಾರಿ ಮಾಡಲಾಗುವುದು ಎಂದು ಜೆಡಿಎಸ್ ಘೋಷಣೆ ಮಾಡಿದೆ.

ಮಾತೃಶ್ರೀ ಮತ್ತು ಮಹಿಳಾ ಸಬಲೀಕರಣ:

ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲಮನ್ನಾ, ಗರ್ಭಿಣಿ ತಾಯಂದಿರ ಅಗತ್ಯತೆ ಪೂರೈಕೆಗೆ 6 ತಿಂಗಳ ಕಾಲ 6,000 ರೂ. ಭತ್ಯೆ, ವಿಧವಾ ವೇತನ 900 ರೂ.ನಿಂದ 2,500 ರೂ.ಗಳಿಗೆ ಹೆಚ್ಚಳ, ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕರಿಗೆ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 5000 ರೂ.ವರೆಗೆ ಹೆಚ್ಚಿನ ವೇತನ, ಕನಿಷ್ಟ 15 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಕಾರ್ಯಕರ್ತೆಯರಿಗೆ ಪಿಂಚಣಿ ಕೊಡಲಾಗುವುದು ಎಂದು ಘೋಷಣೆ ಮಾಡಲಾಗಿದೆ.

ಕನ್ನಡವೇ ಮೊದಲು:

ಕೇಂದ್ರ ಸರಕಾರದ ನಾಗರಿಕ ಸೇವೆಗಳಾದ ರೈಲ್ವೆ, ಬ್ಯಾಂಕಿಂಗ್, ರಾಜ್ಯದಲ್ಲಿರುವ ಕೇಂದ್ರ ಸಾರ್ವಜನಿಕ ಉದ್ಯಮಗಳು, ಕೇಂದ್ರ ಭದ್ರತಾಪಡೆ ಇನ್ನಿತರೆ ನೇಮಕದಲ್ಲಿ ಕನ್ನಡದಲ್ಲೇ ಪರೀಕ್ಷೆ ನಡೆಸಿ ಕನ್ನಡಿಗರಿಗೆ ಆದ್ಯತೆ ನೀಡಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಹಾಗೂ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಿಗೆ ಅಗತ್ಯ ಕಾಯಿದೆ ಜಾರಿ ಮಾಡಲಾಗುವುದು ಎಂದು ಜನತಾ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

ಶಿಕ್ಷಣಕ್ಕೆ ಮಾನ್ಯತೆ:

ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 6.8 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್, ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಮತ್ತು ಆರ್ಥಿಕವಾಗಿ ಹಿಂದುಳಿದಿರುವ, 18 ವರ್ಷ ತುಂಬಿರುವ 60,000 ಸಾವಿರ ವಿದ್ಯಾರ್ಥಿನಿಯರಿಗೆ ವಿದ್ಯುತ್ ಚಾಲಿತ ಮೊಪೆಡ್ ನೀಡಲಾಗುವುದು ಹಾಗೂ ಶಾಲೆ ಕಾಲೇಜಿಗೆ ತೆರಳುವ ಎಲ್ಲ ಮಕ್ಕಳಿಗೆ ಅಗತ್ಯ ಸಾರಿಗೆ ವ್ಯವಸ್ಥೆ ಮಾಡಲಾಗುವುದು.

ನಿಮ್ಹಾನ್ಸ್ ಮಾದರಿ ಆಸ್ಪತ್ರೆ:

ರಾಜ್ಯದಲ್ಲಿ ಎಲ್ಲರಿಗೂ ಆರೋಗ್ಯ ಸೌಲಭ್ಯ ಸಮಾನವಾಗಿರುತ್ತದೆ. ರಾಜ್ಯ ಸರಕಾರದಿಂದ ನಿಮ್ಹಾನ್ಸ್ ಮಾದರಿಯಲ್ಲಿ 500 ಹಾಸಿಗೆಯುಳ್ಳ ಆಧುನಿಕ ನರವಿಜ್ಞಾನ ವೈದ್ಯಕೀಯ ಸಂಸ್ಥೆ ಸ್ಥಾಪನೆ, ಆಯುಷ್ಮಾನ್ ಭಾರತ್, ಯಶಸ್ವಿನಿ ಯೋಜನೆಯಡಿಯಲ್ಲಿ ಸರ್ಪಡೆಯಾಗದ ಮತ್ತು ದುಬಾರಿ ವೆಚ್ಚದ ವೈದ್ಯಕೀಯ ಶಸ್ತ್ರಚಿಕಿತ್ಸೆಗಳಾದ ಮೂಳೆಮಜ್ಜೆ ಚಿಕಿತ್ಸೆ (Bone Marrow Treatment, ಹೃದಯ, ಶ್ವಾಸಕೋಶ ಮತ್ತು ಯಕೃತ್ ಬದಲಾಯಿಸುವ ಶಸ್ತ್ರಚಿಕಿತ್ಸೆಗಳಿಗೆ (Heart, Lungs, Liver Transplantation)ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 25 ಲಕ್ಷದ ರೂ.ವರೆಗಿನ ಪರಿಹಾರವನ್ನು 24 ಗಂಟೆಗಳ ಅವಧಿಯಲ್ಲಿ ನೀಡಲಾಗುವುದು, ಒಟ್ಟು 6006 ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ 30 ಹಾಸಿಗೆಗಳ ಹೈಟೆಕ್ ಆಸ್ಪತ್ರೆ ಸ್ಥಾಪನೆ, ಅಗತ್ಯ ಸಿಬ್ಬಂದಿ ವೈದ್ಯರ ನೇಮಕ ಮಾಡಲಾಗುವುದು ಎಂದು ಜನತಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿದೆ.

ಕೃಷಿಗೆ ಅಗ್ರ ಆದ್ಯತೆ, ರೈತರಿಗೆ ಅನುಕೂಲ:

ರೈತ ಸ್ವಾಭಿಮಾನದ ಬದುಕು ನಡೆಸುವ ನಿಟ್ಟಿನಲ್ಲಿ ಜೆಡಿಎಸ್ ಚಿಂತಿಸಿದೆ. ಪ್ರತೀ ಎಕರೆಗೆ 10,000 ರೂ. ಸಹಾಯ ಧನ, ರೈತ ಯುವಕರನ್ನು ಮದುವೆ ಆಗುವ ಯುವತಿಯರಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ, ಪ್ರತಿ ಕೃಷಿ ಕಾರ್ಮಿಕ ಕುಟುಂಬಕ್ಕೆ ಮಾಸಿಕ 2000 ರೂ. ಸಹಾಯ ಧನ, ದಿನದ 24 ಗಂಟೆ ಕಾಲ ಕೃಷಿಗೆ ಉಚಿತ ವಿದ್ಯುತ್ ಒದಗಿಸಲಾಗುವುದು ಎಂದು ಜೆಡಿಎಸ್ ಘೋಷಣೆ ಮಾಡಿದೆ.

ಹಿರಿಯ ನಾಗರಿಗರಿಗೆ ನೆರವು:

ಹಿರಿಯ ನಾಗರಿಕರು ಸಂಕಷ್ಟಕ್ಕೆ ಸಿಲುಕಬಾರದು ಎನ್ನುವ ಉದ್ದೇಶದಿಂದ ಹಿರಿಯರ ಮಾಶಾಸನವನ್ನು 1200 ರೂ.ನಿಂದ 5000 ರೂ.ಗಳಿಗೆ ಏರಿಕೆ ಮಾಡಲಾಗುವುದು ಇಂದು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿದೆ.

ಧಾರ್ಮಿಕ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕ್ರಮ:

ರಾಜ್ಯದಲ್ಲಿ ಕುವೆಂಪು ಕನಸಿನ ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡುವುದು ಜೆಡಿಎಸ್ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾ.ರಾಜೇಂದ್ರ ಸಾಚರ್ ಆಯೋಗದ ವರದಿ ಶಿಫಾರಸುಗಳ ಅನುಷ್ಠಾನ ಕುರಿತು ಅಧ್ಯಯನಕ್ಕೆ ಸಮಿತಿ ರಚನೆ ಮತ್ತು ಆ ಸಮಿತಿ ವರದಿ ಆಧರಿಸಿ ಜಾರಿಗೆ ಕ್ರಮ,ರಾಜ್ಯದಲ್ಲಿನ ವಕ್ಫ್ ಆಸ್ತಿ ಸಂರಕ್ಷಣೆ ಮತ್ತು ಅಭಿವೃದ್ದಿಗೆ ಉನ್ನತಮಟ್ಟದ ಸಮಿತಿ ರಚನೆ; ಅಗತ್ಯ ಅನುದಾನ ನೀಡಿಕೆ,ಅಶಕ್ತ ಪುರುಷ ಮತ್ತು ಅಬಲೆಯರ ಆಶ್ರಯಕ್ಕೆ ಸಹಾರಾ ಯೋಜನೆ ಜಾರಿ, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.20ರಷ್ಟಿರುವ ಧಾರ್ಮಿಕ ಅಲ್ಪಸಂಖ್ಯಾತರ ಏಳಿಗೆಗೆ ಬಜೆಟ್ ನಲ್ಲಿ ಶೇ.5ರಷ್ಟು ಅನುದಾನ ಮೀಸಲು ಇಡಲಾಗುವುದು ಎಂದು ಜೆಡಿಎಸ್ ಘೋಷಣೆ ಮಾಡಿದೆ.

ಯುವಜನ ಸಬಲೀಕರಣಕ್ಕೆ ಒತ್ತು:

ರಾಜ್ಯದಲ್ಲಿ ಯುವ ಮಾನವ ಸಂನ್ಮೂಲವನ್ನು ಪರಿಣಾಮಕಾರಿಯಾಗಿ ರೂಪಿಸಿ ಬೆಳೆಸುವ ಬಗ್ಗೆ ಗಮನ ಹರಿಸಲಾಗಿದೆ. ಒಂದು ವರ್ಷದ ಕೌಶಲ್ಯ ಅಭಿವೃದ್ದಿ ತರಬೇತಿ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವ ಯುವಕ/ಯುವತಿಯರಿಗೆ ಮಾಸಿಕ 8000 ರೂ. ಭತ್ಯೆ, ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮ ವಲಯಗಳಲ್ಲಿ ತೊಡಗಿಸಿಕೊಳ್ಳುವ ಯುವಕ/ಯುವತಿಯರಿಗೆ ನೆರವು, ಕೈಗಾರಿಕೆ ಉತ್ಪನ್ನ ಘಟಕ ಸ್ಥಾಪನೆಗೆ 10 ಲಕ್ಷ ರೂ. ಸಹಾಯಧನ, ತರಬೇತಿ ಮತ್ತು ಸೇವೆಗಳ ವಲಯದಲ್ಲಿ ಒದಗಿಸುವ ವಲಯಗಳಲ್ಲಿ ತೊಡಗಿಸಿಕೊಳ್ಳುವವರಿಗೆ 3 ಲಕ್ಷ ರೂ. ಸಹಾಯಧನ, ಸಣ್ಣ ಉದ್ಯಮವಾಗಿ ವ್ಯಾಪಾರ-ವಹಿವಾಟು ನಡೆಸುವವರಿಗೆ 2 ಲಕ್ಷ ರೂ. ಸಹಾಯಧನ, ಸಣ್ಣ ಉದ್ಯಮ ನಡೆಸುವ ಮಹಿಳಾ ಉದ್ಯಮಿಗಳಿಗೆ ಮೇಲಾಧಾರ ಭದ್ರತೆ ರಹಿತ (Collateral Free) 2 ಕೋಟಿ ರೂ.ವರೆಗೆ ಬ್ಯಾಂಕುಗಳ ಮುಖೇನ ಸಾಲ ಕೊಡಲಾಗುವುದು.

ವಿಕಲ ಚೇತನರಿಗೆ ಸಹಾಯಹಸ್ತ:

ರಾಜ್ಯದಲ್ಲಿನಾ ವಿಕಲಚೇತನರಿಗೆ 600 ರೂ.ಗಳ ಪಿಂಚಣಿಯನ್ನು 2,500 ರೂ.ಗಳಿಗೆ ಹೆಚ್ಚಳ, ಭಾರತೀಯ ಸಂಕೇತ ಭಾಷೆಯನ್ನು ದೇಶದ 23ನೇ ಅಧಿಕೃತ ಭಾಷೆಯನ್ನಾಗಿ ಮಾನ್ಯತೆ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ, ಬುದ್ದಿಮಾಂದ್ಯ ಮಕ್ಕಳ ಆರೋಗ್ಯ ವೃದ್ಧಿಗೆ ಆರೋಗ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ, ವಿಶೇಷ ಸಾಮರ್ಥ್ಯ ಉಳ್ಳ ಮಕ್ಕಳನ್ನು ಹೊಂದಿರುವ ಕುಟುಂಬಗಳ ನೆರವಿಗಾಗಿ ‘ ಮಿಷನ್ ವಾತ್ಸಲ್ಯ ‘ ಕಾರ್ಯಕ್ರಮ ಜಾರಿಗೆ ತರಲಾಗುವುದು ಎಂದು ಪಕ್ಷ ಘೋಷಣೆ ಮಾಡಿದೆ.

ಪೊಲೀಸರಿಗೆ ಸಿಹಿಸುದ್ದಿ:

ಔರಾದ್ಕರ್ ಸಮಿತಿ ವರದಿಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ನೀಡುವ ವೇತನ, ಸೌಲಭ್ಯಗಳಲ್ಲಿ ನ್ಯೂನತೆಗಳಿದ್ದು, ಈ ತಾರತಮ್ಯ ಹೋಗಲಾಡಿಸಿ, ನ್ಯಾಯಯುತ ವೇತನ, ಸೌಲಭ್ಯ ನೀಡಲಾಗುವುದು.

ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳ ಏಳಿಗೆ:

ಕೆ.ಎಸ್.ಎಫ್.ಸಿ ಪ್ರಸ್ತುತ ಶೇ.4ರಷ್ಟು ಬಡ್ಡಿ ವಿಧಿಸುತ್ತಿದ್ದು, ಇದಕ್ಕೆ ಇನ್ನಷ್ಟು ಸಬ್ಸಿಡಿ ನೀಡಿ ಎಸ್.ಸಿ/ಎಸ್.ಟಿ ಉದ್ದಿಮೆದಾರರಿಗೆ ಬಡ್ಡಿದರವನ್ನು ಶೇ.4ರಿಂದ ಶೇ.2ಕ್ಕೆ ಇಳಿಸುವುದು, ಎಸ್.ಸಿ/ಎಸ್.ಟಿ ಉದ್ದಿಮೆದಾರು/ಗುತ್ತಿಗೆದಾರರಿಗೆ ಶೇ.2 ಬಡ್ಡಿ ದರದಲ್ಲಿ 5 ಕೋಟಿ ರೂ.ವರೆಗೆ ಬಂಡವಾಳ ಒದಗಿಸಲಾಗುವುದು, ರಾಜ್ಯದಲ್ಲಿ ಅನುಷ್ಠಾನದಲ್ಲಿರುವ ವಿವಿಧ ವಸತಿ ಯೋಜನೆಗಳಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇ.50 ರಿಯಾಯಿತಿ ದರದಲ್ಲಿ ಮನೆ ಹಂಚಿಕೆ ಮಾಡಲಾಗುವುದು.

ವೃತ್ತಿನಿರತ ವಕೀಲರಿಗೆ ರಕ್ಷಣೆ:

ವೃತ್ತಿನಿರತ ವಕೀಲರ ರಕ್ಷಣೆಗೆ ಕಾಯಿದೆ ಜಾರಿ ಹಾಗೂ ನೂತನವಾಗಿ ನೋಂದಾಯಿತ ವಕೀಲರಿಗೆ ಈಗ ನೀಡುವ ಮಾಸಿಕ ಭತ್ಯೆ (Stipend) ವನ್ನು 2000ದಿಂದ 3000 ರೂ.ಗಳಿಗೆ ಹೆಚ್ಚಳ ಮಾಡಲಾಗುವುದು.

ಸೆಕ್ಯೂರಿಟಿ ಗಾರ್ಡ್ ಮತ್ತು ಆಟೋ ಚಾಲಕರಿಗೆ ನೆರವು:

ಹಾಗೆಯೇ ನೋಂದಾಯಿತ ಸೆಕ್ಯೂರಿಟಿ ಗಾರ್ಡ್ ಗಳಿಗೆ ಮಾಸಿಕ 2000 ಸಹಾಯಧನ ಕೊಡಲಾಗುವುದು. ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವ ಆಟೋ ಚಾಲಕರಿಗೆ ಮಾಸಿಕ 2000 ರೂ. ಸಹಾಯ ಧನ ಕೊಡಲಾಗುವುದು.

ಸಾರಿಗೆ ನೌಕರರು ಅಗತ್ಯ ಸೇವಾ ಕಾಯ್ದೆ ಅಡಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಅವರಿಗೆ ವೇತನ ಆಯೋಗ ಜಾರಿಯಾದಾಗ ಯಥಾವತ್ತು ಅಳವಡಿಸಿಕೊಂಡು ನಗದು ರಹಿತ ವೈದ್ಯ ಸೇವೆ ಕೊಡಲಾಗುವುದು.

ಮೀಸಲಾಗಿ ಗೊಂದಲ ನಿವಾರಣೆ:
ಮುಸ್ಲಿಂ ರಿಗೆ ಶೈಕ್ಷಣಿಕವಾಗಿ ಆರ್ಥಿಕವಾಗಿ ಮುಂದುವರಿಯಲು ಹೆಚ್.ಡಿ.ದೇವೆಗೌಡರ ಕಾಲದಲ್ಲಿ ಶೇ.4ರಷ್ಟು ಮೀಸಲು ನೀಡಲಾಗಿತ್ತು. ಅದನ್ನು ಬಿಜೆಪಿ ಸರಕಾರ ಏಕಾಏಕಿ ಹಿಂಪಡೆದಿದೆ. ಆ ಮೀಸಲು ವ್ಯವಸ್ಥೆಯನ್ನು ಮರು ಜಾರಿ ಮಾಡಲಾಗುವುದು ಎಂದು ಜೆಡಿಎಸ್ ಘೋಷಣೆ ಮಾಡಿದೆ.

ಹಳೆಯ ಪಿಂಚಣಿ ಯೋಜನೆ ಜಾರಿ:

ರಾಜ್ಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಪರಾಮರ್ಶೆಗೆ ಒಳಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿ ಮಾಡಲಾಗುವುದು.

ಕೈಗಾರಿಕಾಭಿವೃದ್ಧಿ:

ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕೆ ಮತ್ತು ಕೃಷಿ ಆಧಾರಿತ ಕ್ಲಸ್ಟರ್ ಗಳನ್ನು ಸ್ಥಾಪನೆ ಮಾಡಲಾಗುವುದು, ಸುಮಾರು 1000 ಕೋಟಿ ರೂ., ಬೆಳಗಾವಿಯಲ್ಲಿ 1000 ಕೋಟಿ ರೂ. ವೆಚ್ಚದಲ್ಲಿ ಚರ್ಮೋದ್ಯಮದ ಕ್ಲಸ್ಟರ್ ಸ್ಥಾಪನೆ ಮಾಡಲಾಗುವುದು, ಕೋಲಾರದಲ್ಲಿ 1000 ಕೋಟಿ ರೂ.ಗಳ ಟೊಮೋಟೊ ಕ್ಲಸ್ಟರ್, ರಾಮನಗರ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ 1000 ಕೋಟಿ ರೂ. ವೆಚ್ಚದ ರೇಷ್ಮೆ ಕ್ಲಸ್ಟರ್, ಉಳಿದ 15 ಜಿಲ್ಲೆಗಳಲ್ಲಿ 5000 ಕೋಟಿ ವೆಚ್ಚದಲ್ಲಿ ಕೃಷಿ, ಕೈಗಾರಿಕೆ ಆಧಾರಿತ ಕ್ಲಸ್ಟರ್ ಗಳನ್ನು ಸ್ಥಾಪಿಸಲಾಗುವುದು.

ಜಲಸಂನ್ಮೂಲ ಸದ್ಬಳಕೆ:

ಈಗಾಗಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯಾದ್ಯಂತ ಕೈಗೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮದ ಅಡಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ರಾಜ್ಯಕ್ಕೆ ಹಂಚಿಕೆ ಆಗಿರುವ ಪ್ರತಿ ಹನಿ ನೀರನ್ನೂ ಸದ್ಬಳಕೆ ಮಾಡಿಕೊಳ್ಳಲಾಗಿದೆ. ಈ ಯೋಜನೆಯ 3ನೇ ಹಂತದ ಅನುಷ್ಟಾನಕ್ಕೆ ಬೇಕಿರುವ 1,33,867 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಏಕರೂಪ ಭೂ ಪರಿಹಾರ ಕೊಡಲಾಗುವುದು. ಅಲ್ಲದೆ, ಈ ಯೋಜನೆಗೆ ಅಗತ್ಯ ಇರುವ ಅನುದಾನವನ್ನು ವಾರ್ಷಿಕ 5ರಿಂದ 10 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ.

ನೆನೆಗುದಿಗೆ ಬಿದ್ದಿರುವ ಭದ್ರ ಮೇಲ್ದಂಡೆ ಯೋಜನೆಗೆ ಈಗ ವಾರ್ಷಿಕ 2000 ಕೋಟಿ ರೂ. ಅನುದಾನ ನೀಡಲಾಗುತ್ತಿದ್ದು, ಅದನ್ನು 5000 ಕೋಟಿ ರೂ.ಗಳಿಗೆ ಹೆಚ್ಚಿಸಲಾಗುವುದು. ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು.

ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ. ಅಗತ್ಯ ಪೂರೈಕೆ ಮಾಡುವ 67 ತಿಎಂಸಿತ ಮೇಕೆದಾಟು ಯೋಜನೆಯನ್ನು ಬದ್ಧತೆಯಿಂದ ಜಾರಿಗೆ ತರಲಾಗುವುದು ಎಂದು ಜೆಡಿಎಸ್ ಹೇಳಿದೆ. ಮಹದಾಯಿ ಯೋಜನೆಗೆ ಇರುವ ಎಲ್ಲ ತೊಡಕುಗಳನ್ನು ನಿವಾರಿಸಿ ಯೋಜನೆಯನ್ನು ಜಾರಿ ಮಾಡಲು ಕ್ರಮ ವಹಿಸಲಾಗುವುದು ಎಂದು ಪಕ್ಷ ತಿಳಿಸಿದೆ.

ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳ 8864 ಕೆರೆಗಳಿಗೆ ನೀರು ತುಂಬಿಸುವ ಎತ್ತಿನಹೊಳೆ ಯೋಜನೆಯನ್ನು 4 ವರ್ಷಗಳಲ್ಲಿ ಕಾರ್ಯಗತ ಮಾಡಲಾಗುವುದು. ಅಲ್ಲದೆ, ಈ ಯೋಜನೆಯ ಅನುಷ್ಟಾನಕ್ಕೆ ಅಗತ್ಯ ಇರುವ ಇನ್ನೂ 12500 ಕೋಟಿ ಅನುದಾನ ಒದಗಿಸಲಾಗುವುದು.


ಮುಖ್ಯಾಂಶಗಳು
*12 ಕಾರ್ಯಕ್ರಮಗಳನ್ನು ಘೋಷಣೆ
*ವರ್ಷಕ್ಕೆ 5 ಸಿಲಿಂಡರ್ ಉಚಿತ
*ಸ್ತ್ರೀಶಕ್ತಿ ಸಾಲ ಮನ್ನಾ
*ಕನ್ನಡಕ್ಕೆ ಅಗ್ರ ಮನ್ನಣೆ, ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರ *ಉದ್ಯೋಗಕ್ಕೆ ಮೀಸಲು
*ವಕೀಲರ ರಕ್ಷಣೆಗೆ ಕಾಯಿದೆ
*ರಾಜ್ಯದಲ್ಲಿ ನಿಮ್ಹಾನ್ಸ್ ಮಾದರಿ ಆಸ್ಪತ್ರೆ
*ಬೋನ್ ಮ್ಯಾರೊ ಸೇರಿ ದುಬಾರಿ ಕಾಯಿಲೆಗಳಿಗೆ 25 ಲಕ್ಷ ರೂ.ವರೆಗೆ ಪರಿಹಾರ
*ನ್ಯಾ.ಸಾಚರ್ ವರದಿ ಜಾರಿಗೆ ಕ್ರಮ, ಪೊಲೀಸರ ವೇತನ ತಾರತಮ್ಯ ನಿವಾರಣೆ
*ವಿಕಲಚೇತನರ ಪಿಂಚಣಿ 2500, ಹಿರಿಯ ಪಿಂಚಣಿ 5000 ರೂ.ಗಳಿಗೆ ಏರಿಕೆ

Join Whatsapp
Exit mobile version