Home ಜಾಲತಾಣದಿಂದ ಶಿವಾಜಿನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ

ಶಿವಾಜಿನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ

ಒಟ್ಟು 3130 ನಾಮಪತ್ರ ಕ್ರಮಬದ್ಧ, 502 ನಾಮಪತ್ರ ತಿರಸ್ಕೃತ; ನಾಮಪತ್ರ ಹಿಂಪಡೆಯಲು ನಾಳೆ ಕೊನೆಯ ದಿನ

ಬೆಂಗಳೂರು: ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಆರ್‌. ಮಂಜುನಾಥ ಅವರ ನಾಮಪತ್ರ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣಕ್ಕೆ ತಿರಸ್ಕೃತಗೊಂಡಿದೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಂಜುನಾಥ ಅವರ ಹೆಸರು ಮತದಾರರ ಪಟ್ಟಿಯಲ್ಲೇ ಇಲ್ಲ. ಈ ಕಾರಣದಿಂದ ಅವರ ನಾಮಪತ್ರ ತಿರಸ್ಕರಿಸಲಾಗಿದೆ. ಮಂಜುನಾಥ ಮತದಾರರ ಪಟ್ಟಿಗೆ ಹೆಸರು ಸೇರಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಪಟ್ಟಿಯಲ್ಲಿ ಹೆಸರು ಸೇರಿರುವುದನ್ನು ಖಚಿತಪಡಿಸಿಕೊಂಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

220 ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಶುಕ್ರವಾರ ಪೂರ್ಣಗೊಂಡಿದೆ. ಪರಿಶೀಲನೆಯ ವೇಳೆ 502 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿವೆ.

ಸವದತ್ತಿ-ಯಲ್ಲಮ್ಮ, ಔರಾದ್, ಹಾವೇರಿ, ರಾಯಚೂರು ಹಾಗೂ ಶಿವಾಜಿನಗರ ಕ್ಷೇತ್ರಗಳ ನಾಮಪತ್ರದ ಬಗ್ಗೆ ವಿವಾದವಿತ್ತು. ಒಟ್ಟು ರಾಜ್ಯದಲ್ಲಿ 3632 ಅಭ್ಯರ್ಥಿಗಳಿಂದ 5012 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ 3130 ನಾಮಪತ್ರಗಳು ಕ್ರಮಬದ್ಧವಾಗಿವೆ. 502 ಅಭ್ಯರ್ಥಿಗಳ ನಾಮಪತ್ರ ತಿರಸ್ಕತವಾಗಿವೆ ಎಂದು ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ನಾಮಪತ್ರ ಹಿಂದಕ್ಕೆ ಪಡೆಯಲು ನಾಳೆ ಸೋಮವಾರ  ಕೊನೆಯ ದಿನವಾಗಿದೆ. ನಾಳೆ ಸಂಜೆ ವೇಳೆಗೆ ಅಂತಿಮವಾಗಿ ಕಣದಲ್ಲಿರುವವರ ಸಂಖ್ಯೆ ಸ್ಪಷ್ಟವಾಗಲಿದೆ.

Join Whatsapp
Exit mobile version