Home ಟಾಪ್ ಸುದ್ದಿಗಳು 2023 ವಿಧಾನಸಭೆ ಚುನಾವಣೆಗೆ ಸಂಕ್ರಾಂತಿ ದಿನ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ: ಕುಮಾರಸ್ವಾಮಿ

2023 ವಿಧಾನಸಭೆ ಚುನಾವಣೆಗೆ ಸಂಕ್ರಾಂತಿ ದಿನ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ: ಕುಮಾರಸ್ವಾಮಿ

ಬೆಂಗಳೂರು: ಜನವರಿ ತಿಂಗಳ ಸಂಕ್ರಾಂತಿ ದಿನವೇ 2023ರ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಪ್ರಕಟಿಸಿದರು.


ಜನತಾ ಪರ್ವ 1.O ಹಾಗೂ ಮಿಷನ್ 123 ಗುರಿಯೊಂದಿಗೆ ಬಿಡದಿಯ ತಮ್ಮ ತೋಟದಲ್ಲಿ ಹ್ಮಮಿಕೊಂಡಿದ್ದ 4 ದಿನಗಳ ಕಾರ್ಯಾಗಾರದ 2ನೇ ದಿನದ ಕೊನೆಯಲ್ಲಿ ಮಾಧ್ಯಮಗಳ ಜತೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.
ಇಂದಿನ ಕಾರ್ಯಾಗಾರದಲ್ಲಿ ಮುಂದಿನ ಅಭ್ಯರ್ಥಿಗಳಿಗೆ 30 ಅಂಶಗಳ ಅಜೆಂಡಾ ನೀಡಿದ್ದೇವೆ. ಆ ಅಜೆಂಡಾ ಪ್ರಕಾರ ಅವರು ಕೆಲಸ ಮಾಡಿ ತೋರಿಸಬೇಕು. ಅವರೆಲ್ಲರೂ 3 ತಿಂಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನ ಮಾಡಬೇಕು. ಯಶಸ್ವಿಯಾಗಿ ಅನುಷ್ಠಾನ ಮಾಡುವ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಲಾಗುವುದು ಎಂದರು ಅವರು.ನಿಗದಿತ ಅವಧಿಯೊಳಗೆ ಈ ಅಜೆಂಡಾವನ್ನು ಗ್ರಾಮ ಪಂಚಾಯ್ತಿ ಮಟ್ಟಕ್ಕೆ ಅನುಷ್ಠಾನ ಮಾಡಲೆಬೇಕು ಹಾಗೂ ಇದನ್ನು ಪರಿವೀಕ್ಷಣೆ ಮಾಡಲು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಪ್ರತಿನಿತ್ಯ ಇದರ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ಅವರು ಮಾಹಿತಿ ನೀಡಿದರು.


ಇಂದು ವೇಳೆ ಈ 30 ಅಂಶಗಳ ಕಾರ್ಯಕ್ರಮ ಅನುಷ್ಠಾನ ಮಾಡದಿದ್ದರೆ ಅಂತಹ ಅಭ್ಯರ್ಥಿಗಳ ಹೆಸರುಗಳನ್ನು ತಡೆ ಹಿಡಿಯುತ್ತೇವೆ. ಅಲ್ಲಿ ಮತ್ತೊಬ್ಬರನ್ನು ಹಾಕುತ್ತೇವೆ. ಇದರಲ್ಲಿ ಯಾವುದೇ ರಾಜಿ ಪ್ರಶ್ನೆ ಇಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ನೀರಾವರಿ ಬಗ್ಗೆ ಬಿಜೆಪಿಗೆ ಬದ್ದತೆ ಇಲ್ಲ: ಮೇಕೆದಾಟು ಸೇರಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ರಾಜ್ಯ ಸರಕಾರಕ್ಕೆ ಹಾಗೂ ಬಿಜೆಪಿಗೆ ಯಾವ ಬದ್ಧತೆಯೂ ಇಲ್ಲ. ಹೊಸ ಮುಖ್ಯಮಂತ್ರಿಗೆ ಕೂಡ ಬದ್ಧತೆ ಇಲ್ಲ. ಮೇಕೆದಾಟು ಯೋಜನೆ ಕೇಂದ್ರ ಸರಕಾರದ ಮುಂದೆಯೇ ಇಲ್ಲ. ರಾಜ್ಯ ರಾಜ್ಯಗಳ ನಡುವೆ ಬಿಕ್ಕಟ್ಟಿದೆ ಎನ್ನುವ ಕಾರಣಕ್ಕೆ ಕೇಂದ್ರ ಹಿಂಜರಿಯುತ್ತಿದೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.
ಹೀಗಾಗಿ. ನೀರಾವರಿ ಯೋಜನೆಗಳ ಬಗ್ಗೆ ಜೆಡಿಎಸ್ ಹೋರಾಟ ಮಾಡಲಿದೆ. ಮುಂಬರುವ ದಿನಗಳಲ್ಲಿ ದೊಡ್ಡ ಹೋರಾಟ ರೂಪಿಸುತ್ತೇವೆ. ಕೇಂದ್ರ ಸರ್ಕಾರದ ವಿರುದ್ದವೂ ಹೋರಾಟ ಮಾಡುತ್ತೇವೆ. ಭಾಷೆ, ನೆಲ, ನೀರಿನ ವಿಚಾರದಲ್ಲಿ ನಾಡಿನ ಹಿತ ಕಾಪಾಡಲು ಜೆಡಿಎಸ್ ಕೆಲಸ ಮಾಡುತ್ತದೆ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ರಾಜ್ಯದಲ್ಲಿ ಜನರು ಎರಡು ರಾಷ್ಟ್ರೀಯ ಪಕ್ಷಗಳನ್ನು ನೋಡಿದ್ದಾರೆ. ಹೀಗಾಗಿ ಅವರ ವರ್ತನೆಗಳು ಏನು ಅನ್ನುವುದು ಗೊತ್ತಿದೆ. ಹೀಗಾಗಿ ಈ ಬಾರಿ ಜನ ನಮ್ಮ ಜತೆ ಇರುತ್ತಾರೆ ಎನ್ನುವ ವಿಶ್ವಾಸ ಇದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಪಂಚರತ್ನ ಯೋಜನೆ ಘೋಷಣೆ: ಪಂಚರತ್ನ ಯೋಜನೆಗಳಾದ ವಸತಿ, ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿಗೆ ವಿಶೇಷ ಯೋಜನೆ ನೀಡುತ್ತೇವೆ. ಈ ಬಗ್ಗೆ ನನ್ನ ಪರಿಕಲ್ಪನೆಯ ಕಾರ್ಯಕ್ರಮಗಳು ಜಾರಿ ಆಗುತ್ತವೆ. ಈ ಎಲ್ಲ ಸಂಗತಿಗಳನ್ನು ಜನರಿಗೆ ಮನದಟ್ಟು ಮಾಡಲಾಗುವುದು. ಅಲ್ಲದೆ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತರು, ಸಮಸ್ಯೆ ಪರಿಹಾರ ನೀಡುವ ಕೆಲಸ ಮಾದುತ್ತೇವೆ. ವಿಧವಾ ವೇತನಾ, ಹಿರಿಯ ನಾಗರೀಕರು, ಯುವಕ ಸಮಸ್ಯೆಗೆ ಬೇಕಾದ ಹಲವು ಯೋಜನೆ ಪ್ರಾರಂಭಿಸುತ್ತೇವೆ. ಮುಂದಿನ 17 ತಿಂಗಳು ಈ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ ಎಂದು ಅವರು ಮಾಹಿತಿ ನೀಡಿದರು.


ಜನತಾ ಪರ್ವ ಮಾಸ್ಟರ್ ಮೈಂಡ್ ನಾನೇ: ಇವತ್ತು ನಾನು ನಮ್ಮ ಪಕ್ಷಕ್ಕಾಗಿ ಶಿಕ್ಷಕ ಆಗಿದ್ದೆ. ನಮ್ಮ ಶಾಸಕರು, ಮುಂದಿನ ಚುನಾವಣೆಯ ಅಭ್ಯರ್ಥಿಗಳಿಗೆ ಪಾಠ ಮಾಡಿದ್ದು ವಿಶೇಷ ಅನುಭವ. ಅಲ್ಲದೆ, ಇಂದಿನ ಪಿಪಿಟಿ ಪ್ಲ್ಯಾನ್ ಕೂಡಾ ನನ್ನದೆ. ಕಂಟೆಂಟ್ ಕೂಡ ನನ್ನದೇ ಎಂದು ಹೆಚ್ಡಿಕೆ ಅವರು ಹೇಳಿದರು. ಕಾಲೇಜು ದಿನಗಳಲ್ಲಿ ನಾನು ಕೊನೆ ಬೇಂಚ್ ವಿದ್ಯಾರ್ಥಿ ಆಗಿದ್ದೆ. ಇಂದು ಅಭ್ಯರ್ಥಿಗಳಿಗೆ ಪಕ್ಷದ ವಿಚಾರಗಳು ತಿಳಿಸಲು ವಿದ್ಯಾರ್ಥಿ ಆಗುವುಕ್ಕಿಂತ ಶಿಕ್ಷಕನಂತೆ ಆಗಿ ಶಾಸಕರಿಗೆ ತಿಳಿ ಹೇಳಿದ್ದೇನೆ. ಅಭ್ಯರ್ಥಿಗಳು ಶಿಸ್ತಿನ ವಿಧ್ಯಾರ್ಥಿಗಳಾಗಿ ಕುಳಿತು ಕೇಳಿದ್ದಾರೆ. ಇಡೀ ಕಾರ್ಯಾಗಾರದ ಸಂಪೂರ್ಣ ಪರಿಕಲ್ಪನೆ ನನ್ನದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು. ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಉಪಸ್ಥಿತರಿದ್ದರು.

Join Whatsapp
Exit mobile version