ಮಂಡ್ಯ: ಆಡಳಿತದಲ್ಲಿದ್ದೇವೆ ಎಂಬ ಕಾರಣಕ್ಕೆ ದುರಹಂಕಾರ, ದರ್ಪ, ದೌರ್ಜನ್ಯ ಮಾಡುವುದನ್ನು ಬಿಡಿ. ನಾಳೆ ಏನಾದರೂ ವಿಧಾನಸಭಾ ಚುನಾವಣೆ ಘೋಷಣೆಯಾದರೆ ದುರ್ಬೀನ್ ಹಾಕಿ ಕಾಂಗ್ರೆಸ್ ಶಾಸಕರನ್ನು ಹುಡುಕುವ ಸ್ಥಿತಿಗೆ ಬರುತ್ತದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭವಿಷ್ಯ ನುಡಿದರು.
ನಗರದ ಕಾಳಿಕಾಂಬ ಸಮುದಾಯ ಭವನದಲ್ಲಿ ಭಾನುವಾರ ನಡೆದ ಜೆಡಿಎಸ್ ಮಂಡ್ಯ ವಿಧಾನಸಭಾ ಕ್ಷೇತ್ರದ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೋವಿದೆ. ನಮ್ಮ ಕಾರ್ಯಕರ್ತರಿಗೆ ಯಾವುದೇ ಹುದ್ದೆಯನ್ನು ನೀಡಿಲ್ಲ ಎನ್ನುವ ಸಂಕಟವನ್ನು ದೂರ ಮಾಡಲು ನಾವು ನೀವೆಲ್ಲ ಜೊತೆಯಲ್ಲಿ ನಡೆಯೋಣ. ನಮ್ಮ ಜೆಡಿಎಸ್ ಮತ್ತು ಬಿಜೆಪಿ ನೇತೃತ್ವದಲ್ಲಿ 150 ಸೀಟುಗಳು ರಾಜ್ಯದಲ್ಲಿ ಬಂದು ಮತ್ತೊಮ್ಮೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಥಳೀಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾರ್ಯಕರ್ತರ ಜೊತೆ ಹೆಜ್ಜೆ ಹಾಕುವ ಮೂಲಕ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಲು ಪಕ್ಷ ಸಂಘಟನೆಯಲ್ಲಿ ತೊಡಗಬೇಕು. ಜನರೊಂದಿಗೆ ಜನರಿಗಾಗಿ ಇರುವ ಜನತಾ ದಳವು ಪ್ರತಿಯೊಬ್ಬ ಕಾರ್ಯಕರ್ತರ ಜೊತೆ ಚರ್ಚೆ ಮಾಡುವುದು ಮತ್ತು ಅವರ ಮನೆಗೆ ಹೋಗಿ ಅವರ ಆತಿಥ್ಯವನ್ನು ಸ್ವೀಕರಿಸಿ ಅವರ ಜೊತೆ ನಾವಿದ್ದೇವೆ ಎಂಬುದನ್ನು ಧೈರ್ಯ ತುಂಬುವ ಕೆಲಸ ಮಾಡುತ್ತೇವೆ. ಇಲ್ಲಿ ಪ್ರಶ್ನೆ ಬರಬಹುದು ಚುನಾವಣೆ ಇನ್ನೂ ಮೂರು ವರ್ಷವಿದೆ ಆಗಲೇ ಸಂಘಟನೆಗೆ ನಿಂತಿದ್ದಾರಾ ಎಂಬುದನ್ನು ಆದರೆ ನಿಮ್ಮೊಂದಿಗೆ ನಾವಿದ್ದೇವೆ ಎನ್ನವುದೊಂದೇ ಉದ್ದೇಶವಾಗಿದೆ ಎಂದರು.