Home ಟಾಪ್ ಸುದ್ದಿಗಳು ಕರ್ನಾಟಕದಲ್ಲೂ ಜೆಸಿಬಿ ಬರುತ್ತೆ, ಒಂದಲ್ಲಾ ಒಂದು ದಿನ ನಾನು ಆ ಸ್ಥಾನಕ್ಕೆ ಬರುತ್ತೇನೆ: ಯತ್ನಾಳ್

ಕರ್ನಾಟಕದಲ್ಲೂ ಜೆಸಿಬಿ ಬರುತ್ತೆ, ಒಂದಲ್ಲಾ ಒಂದು ದಿನ ನಾನು ಆ ಸ್ಥಾನಕ್ಕೆ ಬರುತ್ತೇನೆ: ಯತ್ನಾಳ್

ಹಾವೇರಿ: ಒಂದಲ್ಲ ಒಂದು ದಿನ ಕರ್ನಾಟಕದಲ್ಲೂ ಜೆಸಿಬಿ ಬರುತ್ತದೆ. ಒಂದಲ್ಲ ಒಂದು ದಿನ ನಾನು ಆ ಸ್ಥಾನಕ್ಕೆ ಬಂದೇ ಬರುತ್ತೇನೆ. ಇಂದು ನಮ್ಮ ಬಾವುಟ ಹಾರಿಸೋಕೆ ವಿರೋಧ ಮಾಡಿದವರು ಮುಂದಿನ ದಿನಗಳಲ್ಲಿ ನಮ್ಮ ಬಾವುಟ ಹಾರಿಸೋ ಹಾಗೆ ಮಾಡುತ್ತೇನೆ ನೊಡ್ತಾ ಇರಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಹಾವೇರಿಯಲ್ಲಿ ಗಣಪತಿ ಉತ್ಸವದಲ್ಲಿ ಮಾತನಾಡಿದ ಅವರು 2024ರ ಚುನಾವಣೆಯಲ್ಲಿ ಮತ್ತೆ ಮೋದಿಯನ್ನು ಬೆಂಬಲಿಸಬೇಕು. ಮುಂದಿನ 25 ವರ್ಷ ದೇಶ ನಮ್ಮ ಕೈಯಲ್ಲೇ ಇರುತ್ತದೆ. ಇಂದು ಹಸಿರು ಬಾವುಟ ಹಾರಿಸೋಕೆ ಒಡಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಹಸಿರು ಬಾವುಟನೇ ಇಲ್ದಂಗೆ ಮಾಡ್ತೀವಿ. ಕೆಲ ಸ್ವಾಮೀಜಿಗಳು ಸನಾತನ ಧರ್ಮ ಉಳಿಸುವ ಕೆಲಸ ಮಾಡುತ್ತಿಲ್ಲ. ಧರ್ಮ ಉಳಿಸುವ ಕೆಲಸ ಮಾಡಬೇಕಾದವರು ಮಂತ್ರಿ ಮಾಡಿ ಮುಖ್ಯಮಂತ್ರಿ ಮಾಡಿ ಅಂತಾ ಲಾಬಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಭಾರತ ಎಂದು ಕರೆದರೆ ಕೆಲವರಿಗೆ ನೋವಾಗುತ್ತದೆ. ಭರತನಿಂದ ಭಾರತ ಆಗಿದೆ. ಇಂಡಿಯಾ ಅಂತಾ ಇಟ್ಟವರು ಬ್ರಿಟಿಷರು. ನೀವು ಭಾರತೀಯಾರ? ಅಥವಾ ಬ್ರಿಟಿಷರಿಗೆ ಹುಟ್ಟಿದ್ದೀರಾ? ನಾವು ಭಾರತೀಯರು ನಮ್ಮ ಭಾರತದ ಒಂದು ಟವರ್ ಮೇಲೆ ಒಂದು ಧ್ವಜ ಹಾರಿಸಿದಕ್ಕೆ ಉರಿಯುತ್ತದೆ. ನಮಗಿಂತ ದೊಡ್ಡ ಧ್ವಜ ಹಾರಿಸಿದರೆ ಬಹಳ ದೊಡ್ಡವರಾದ್ರಾ? ನಿಮ್ಮ ಅಪ್ಪಂದಿರಿಗೆ ಹುಟ್ಟಿದ್ದೀರಾ? ನಾವು ಚಂದ್ರನ ಮೇಲೆ ತ್ರಿವಣಧ್ವಜ ಹಾರಿಸಿದ್ದೇವೆ. ನಿಮ್ಮಂಪ್ಪನಿಗೆ ಹುಟ್ಟಿದ್ರೆ ಅಲ್ಲಿ ಹೋಗಿ ಧ್ವಜ ಹಾರಿಸಿ. ಅನ್ನ ತಿನ್ನೋದು ಭಾರತದ್ದು, ನೀರು ಕುಡಿಯುವುದು ಭಾರತದ್ದು. ಮತ್ತೆ ಪಾಕಿಸ್ತಾನಕ್ಕೆ ಜೈ ಅಂತೀರಾ ಅಲ್ಲ, ಯಾರಿಗೆ ಹುಟ್ಟಿದ್ದಿರಾ ಎಂದು ಪ್ರಶ್ನಿಸಿದರು.

ಗಣೇಶ ಉತ್ಸವ ಮಾಡೋಕೆ ಪರವಾನಿಗೆ ಪಡೆಯುವ ಪರಿಸ್ಥಿತಿ ಇದೆ. ಡಿಜೆ ಹಚ್ಚುವಾಗ ಶಬ್ಧಕ್ಕೆ ಇಂತಿಷ್ಟೇ ಮಿತಿ ಇರಬೇಕು. ಸಮಯ ಇಂತಿಷ್ಟೇ ಇರಬೇಕು. ಇಷ್ಟೇಲ್ಲಾ ಮಿತಿ ಹಾಕೋಕೆ ಇದೇನು ಪಾಕಿಸ್ತಾನನಾ? ಭಾರತನಾ? ಅವರು ದಿನಕ್ಕೆ 6 ಬಾರಿ ಕಿರುಚುತ್ತಾರೆ, ಅವರಿಗೆ ಏನು ಎನ್ನುವುದಿಲ್ಲ. ನಾವು ವರ್ಷಕ್ಕೊಮ್ಮೆ ಹಬ್ಬ ಮಾಡ್ತೀವಿ. ನಮಗೆ ರೂಲ್ಸ್ ಹಾಕ್ತೀರಾ? ನಾನು ಈ ಹಿಂದೆ ಸ್ವತಂತ್ರವಾಗಿ ಪರಿಷತ್ ಸ್ಥಾನಕ್ಕೆ ಆಯ್ಕೆ ಆಗಿದ್ದೆ. ಯಾಕೆಂದರೆ ನಮ್ಮಲ್ಲೂ ಕೆಲವು ಸಲ ನಮ್ಮಂತವರಿಗೆ ಟಿಕೆಟ್ ಕೊಡಲ್ಲ. ಯಾಕೆಂದರೆ ವಂಶ ಬೆಳೆಸಬೇಕಲ್ಲ, ಮಕ್ಕಳಿಗೆ ಮೊಮ್ಮಕ್ಕಳಿಗೆ ಅಧಿಕಾರ ಕೊಡಬೇಕಲ್ಲ. ಹೀಗಾಗಿ ನಮ್ಮಲ್ಲೂ ಕೆಲವು ಸಲ ಟಿಕೆಟ್ ಕೊಡಲ್ಲ. ನನಗೆ ಎರಡೇ ತಿಂಗಳು ಗೃಹ ಸಚಿವ ಮಾಡಿ ನೋಡಿ. ಉತ್ತರ ಪ್ರದೇಶದ ಬಗ್ಗೆ ಗೊತ್ತಲ್ಲ, ಆ ರೀತಿ ಕರ್ನಾಟಕ ಮಾಡುತ್ತೇನೆ. ಪೊಲೀಸರ ಕೈಯಲ್ಲಿ ಗನ್ ಕೊಡ್ತಾರೆ. ಆದರೆ ಅದನ್ನು ಬಳಸುವಂತಿಲ್ಲ ಅಂತೆ. ಹಾಗಾದರೆ ಪೊಲೀಸರ ಕೈಗೆ ಗನ್ ಕೊಡೋದು ಏಕೆ? ಎಂದು ಗುಡುಗಿದರು.

ಉಪಮುಖ್ಯಮಂತ್ರಿಗೆ ಸಂವಿಧಾನಾತ್ಮಕವಾಗಿ ಯಾವುದೇ ಅಧಿಕಾರವಿಲ್ಲ. ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸಿಎಂ ಮತ್ತು ಗೃಹ ಸಚಿವರು ಇರಬೇಕು. ಅಲ್ಲಿ ವ್ಯವಹಾರ ಮಾಡೋಕೆ ಈ ಉಪಮುಖ್ಯಮಂತ್ರಿ ಹೋಗಿ ಕೂತಿರ್ತಾನೆ. ಅವನ ಕೈಯಲ್ಲಿರೋದು ನೀರಾವರಿ ಇಲಾಖೆ. ಅವನು ಪೊಲೀಸರ ಸಭೆಯಲ್ಲಿ ಕೂತಿರ್ತಾನೆ. ಐಪಿಎಸ್ ಅಧಿಕಾರಿಗಳಿಗೆ ಹೇಳ್ತಾನೆ ಇದು ನಮ್ಮ ಸರ್ಕಾರ ಹಿಂದೂ ಶಾಲು ಹಾಕೋದು ಅಲ್ಲ. ಹಿಂದೂ ಕಾರ್ಯಕ್ರಮಗಳಲ್ಲಿ ಪೊಲೀಸರು ಡ್ಯಾನ್ಸ್ ಮಾಡ್ತಾರೆ ಏನ್ ಮಾಡ್ತಿಯಾ? ಅವರಿಗೂ ಹಿಂದೂ ಬಗ್ಗೆ ಅಭಿಮಾನ ಇರೋದು ತಪ್ಪಾ? ಈ ಗೃಹ ಸಚಿವ ಅಂತೂ ಕಠಿಣ ಕ್ರಮ ಕೈಗೊಳ್ಳೊದು, ತೀವ್ರ ಕಠಿಣ ಕ್ರಮ ಕೈಗೊಳ್ಳೊದು ಹೇಳ್ತಾನೆ. ಆದರೆ ಯಾವುದೇ ಕ್ರಮ ಕೈಗೊಳ್ಳೋದಿಲ್ಲ. ಇಂತಹ ನರಸತ್ತ ಸರ್ಕಾರ ನರಸತ್ತ ಸಿಎಂ ಬಂದರೆ ಹೀಗೇ ಆಗೋದು ಎಂದು ಸರ್ಕಾರದ ವಿರುದ್ಧ ಯತ್ನಾಳ್ ಕಿಡಿಕಾರಿದ್ದಾರೆ.

Join Whatsapp
Exit mobile version