ನವದೆಹಲಿ: ಗುಂಡೇಟಿಗೆ ಒಳಗಾಗಿದ್ದ ಜಪಾನ್ ನ ಮಾಜಿ ಪ್ರಧಾನಿ ಶಿಂಜೊ ಅಬೆ ಮೃತಪಟ್ಟಿರುವುದರಿಂದ ಅವರ ಗೌರವಾರ್ಥ ನಾಳೆ ಶನಿವಾರ ದೇಶಾದ್ಯಂತ ಶೋಕಾಚರಣೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಅಬೆ ಶಿಂಜೊ ಅವರ ಬಗ್ಗೆ ನಮ್ಮ ಆಳವಾದ ಗೌರವದ ಸಂಕೇತವಾಗಿ, 2022 ರ ಜುಲೈ 9 ರಂದು ಒಂದು ದಿನದ ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಲಾಗುವುದು ಎಂದು ಬರೆದುಕೊಂಡಿದ್ದಾರೆ.
ಶೋಕಾಚರಣೆ ಘೋಷಿಸಿರುವುದರಿಂದ ಯಾವುದೇ ಅದ್ಧೂರಿ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳು ನಾಳೆ ನಡೆಯುವುದಿಲ್ಲ. ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತದೆ.
ಎರಡು ಬಾರಿ ಗುಂಡು ಹಾರಿಸಿದ್ದರಿಂದ ಗಾಯಗೊಂಡ ಶಿಂಜೊ ಅಬೆ ಹೃದಯ ಉಸಿರಾಟ ಸ್ತಂಭನಕ್ಕೊಳಗಾಗಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶುಕ್ರವಾರ ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.