ಬೆಂಗಳೂರು: ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಎರಡು ಜೀವಗಳು ಬಲಿಯಾಗಿದ್ದು, ಇದಕ್ಕೆ ಕಾರಣರಾದ ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ ಆಯುಕ್ತರು, ಬಿಡಿಎ ಆಯುಕ್ತರು ಹಾಗೂ ಜಲ ಮಂಡಲ ಅಧ್ಯಕ್ಷರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಜನತಾ ಪಾರ್ಟಿ ವತಿಯಿಂದ ಲೋಕಾಯುಕ್ತರಿಗೆ ಗುರುವಾರ ದೂರು ಸಲ್ಲಿಸಲಾಯಿತು.
ಬೆಂಗಳೂರು ನಗರ ಅವೈಜ್ಞಾನಿಕ ರಸ್ತೆಗಳಿಂದ ಕೂಡಿದ್ದು, ರಸ್ತೆಯಲ್ಲಿ ವಾಹನ ಸವಾರರು ಓಡಾಡಲು ಭಯಪಡುವಂತಾಗಿದೆ. ನಗರದ ಬಹುತೇಕ ಕಡೆ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ಇದನ್ನು ಮುಚ್ಚುವ ಕಾರ್ಯ ನಡೆದಿಲ್ಲ. ಇದರಿಂದ ರಸ್ತೆಯಲ್ಲಿ ವಾಹನ ಸವಾರರು ಓಡಾಡಲು ಭಯ ಪಡುವಂತಾಗಿದೆ. ಅಧಿಕಾರಿಗಳು ಒಳ್ಳೆಯ ಗುಣ ಮಟ್ಟದ ರಸ್ತೆ ನಿರ್ಮಾಣ ಮಾಡುವ ಬದಲು ಕಳಪೆ ಮಟ್ಟದ ಕಾಮಗಾರಿಯನ್ನು ನಿರ್ಮಾಣದಿಂದ ರಸ್ತೆಗಳು ಹಾಳಾಗಿ ಗುಂಡಿಗಳು ಬಿದ್ದಿವೆ, ಇದರ ಪರಿಣಾಮ ಸಾರ್ವಜನಿಕ ಸಾವುಗಳು ಹೆಚ್ಚಾಗಿವೆ. ಈ ವರ್ಷದಲ್ಲಿ ಎರಡು ಅಮೂಲ್ಯ ಜೀವಗಳನ್ನು ಬಲಿ ಪಡೆದಿರುವ ರಸ್ತೆಗಳು ಹಾಗೂ ಅವೈಜ್ಞಾನಿಕ ರಸ್ತೆಗಳನ್ನು ನಿರ್ಮಾಣ ಮಾಡಿರುವ ಅಧಿಕಾರಗಳ ವಿರುದ್ಧ ಜನತಾ ಪಾರ್ಟಿ ವತಿಯಿಂದ ಲೋಕಯುಕ್ತರಿಗೆ ದೂರು ನೀಡಲಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಕೊಳ್ಳುವಂತೆ ಒತ್ತಾಯಿಸಲಾಗಿದೆ ಎಂದು ಜನತಾ ಪಕ್ಷದ ನಗರ ಅಧ್ಯಕ್ಷ ಎನ್.ನಾಗೇಶ್ ತಿಳಿಸಿದ್ದಾರೆ.
ರಾಜ್ಯ ಅಲ್ಪ ಸಂಖ್ಯಾತ ಘಟಕ ಅಧ್ಯಕ್ಷ ಹುಸೇನ್ ಸಾಬ್ ಕೆರೂರು, ಪಕ್ಷದ ಪ್ರಧಾನ ಕಾರ್ಯದರ್ಶಿ ಎಚ್.ಶಿವಕುಮಾರ್ , ಸದಸ್ಯತ್ವ ಸಮಿತಿ ಸದಸ್ಯರಾದ ಅಭಿಷೇಕ್, ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಹರ್ಷ ಗೌಡ ಹಾಜರಿದ್ದರು.