ರಾಯಚೂರು: ಇತ್ತೀಚೆಗೆ ರಾಯಚೂರಿನಲ್ಲಿ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರ ಸಮಸ್ಯೆಗಳನ್ನು ಆಲಿಸಲಿಲ್ಲ. ಇದು ನಿಜವಾದ ಯಾತ್ರೆಯಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಪಕ್ಷದ ಕಾರ್ಯಕ್ರಮ ಆಗಿದ್ದರೆ ಜಿಲ್ಲಾಮಟ್ಟದ ಅಧಿಕಾರಿಗಳೆಲ್ಲ ಏಕೆ ಭಾಗವಹಿಸಿದ್ದರು. ಸರ್ಕಾರಿ ಕಾರ್ಯಕ್ರಮವೇ ಆಗಿದ್ದರೆ, ರೈತರ, ಕಾರ್ಮಿಕರ, ದುಡಿಯುವ ವರ್ಗದ ಸಮಸ್ಯೆಗಳನ್ನು ಚರ್ಚಿಸಬೇಕಿತ್ತು. ಜಿಲ್ಲೆಯಲ್ಲಿ ಅತಿವೃಷ್ಟಿಯಾಗಿ ಭಾರಿ ಪ್ರಮಾಣದಲ್ಲಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು.
ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ನೀಡುವುದು ನಿಜವಾದ ಜನಸಂಕಲ್ಪ ಯಾತ್ರೆ. ಪ್ರಚಾರದ ಗೀಳಿಗಾಗಿ ಇವರು ಪರಿಶಿಷ್ಟರ ಮನೆಯಲ್ಲಿ ಊಟ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಮಧ್ಯಾಹ್ನ 12 ಗಂಟೆಯಿಂದ ರೈತರು ಕಾದು ಕುಳಿತರೂ ಸರಿಯಾಗಿ ಸ್ಪಂದಿಸಲಿಲ್ಲ. ಶಾಲು ಹಾಕಿಸಿಕೊಳ್ಳಲು, ದೇವಸ್ಥಾನ ಸುತ್ತಲು ಇವರಿಗೆ ಸಮಯವಿದೆ. ಆದರೆ ರೈತರ ಸಮಸ್ಯೆ ಆಲಿಸಲು ಇವರಿಗೆ ಸಮಯ ಇರಲಿಲ್ಲ ಎಂದರು.
ರಾಯಚೂರು ಜಿಲ್ಲೆಯಲ್ಲಿ ಒಂದಾದರೂ ಸ್ಥಾನ ಬಿಜೆಪಿ ಗೆಲ್ಲಲಿ ನೋಡೋಣ. ಮುಖ್ಯಮಂತ್ರಿಗೆ ಮನವಿ ಕೊಟ್ಟರೂ ಅದಕ್ಕೆ ಸರಿಯಾಗಿ ಉತ್ತರ ಬರುವುದೇ ಇಲ್ಲ. ಜನರ ಆಶೋತ್ತರ ಆಲಿಸುವುದೇ ಇಲ್ಲ. ಇಂತಹ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವೇ ಇಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಅಬ್ದುಲ್ ನಝೀರ್, ದೇವರಾಜ ನಾಯಕ, ಪ್ರಭಾಕರ ಪಾಟೀಲ ಉಪಸ್ಥಿತರಿದ್ದರು.