Home ಕರಾವಳಿ ಮಂಗಳೂರಿನ ಜಾಮಿಯಾ ಮಸೀದಿಯಲ್ಲಿ ಧ್ವನಿವರ್ಧಕ ಬಳಕೆಗೆ ಸ್ವಯಂ ನಿರ್ಬಂಧ ಹೇರಿದ ಆಡಳಿತ ಮಂಡಳಿ

ಮಂಗಳೂರಿನ ಜಾಮಿಯಾ ಮಸೀದಿಯಲ್ಲಿ ಧ್ವನಿವರ್ಧಕ ಬಳಕೆಗೆ ಸ್ವಯಂ ನಿರ್ಬಂಧ ಹೇರಿದ ಆಡಳಿತ ಮಂಡಳಿ

ಮಂಗಳೂರು: ರಾಜ್ಯದಲ್ಲಿ ಸದ್ಯ ಚರ್ಚೆಯಲ್ಲಿರುವ ಮಸೀದಿಯಲ್ಲಿನ ಧ್ವನಿವರ್ಧಕ ಬಳಕೆಯ ಕುರಿತಾದ ವಿವಾದದ ಮಧ್ಯೆಯೇ ಮಂಗಳೂರಿನ ಕುದ್ರೋಳಿಯ ಜಾಮಿಯಾ ಮಸೀದಿಯಲ್ಲಿ ಧ್ವನಿವರ್ಧಕ ಬಳಕೆಗೆ ಸ್ವಯಂ ನಿರ್ಬಂಧ ಹೇರಲಾಗಿದೆ. ಇಂದಿನಿಂದ ಆಝಾನ್ ಗೆ ಮೈಕ್ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಕುದ್ರೋಳಿ ಜಾಮಿಯಾ‌ ಮಸೀದಿ ಅಧ್ಯಕ್ಷ KS ಮಸೂದ್ ಹೇಳಿದ್ದಾರೆ.

ಈ ಬಗ್ಗೆ ಇಂದು ಮಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ತೀರ್ಮಾನವನ್ನು ಸ್ವಾಗತಿಸುತ್ತೇವೆ. ಐದು ಹೊತ್ತಿನ ಆಝಾನ್’ಗೂ ಧ್ವನಿವರ್ಧಕ ಬಳಕೆ ನಿಲ್ಲಿಸುವುದಾಗಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿಗೆ ಗೌರವ ನೀಡಿ ಈ ತೀರ್ಮಾನ ಕೈಗೊಂಡಿದ್ದು, ದೇವರ ಪ್ರಾರ್ಥನೆಗೆ ಆಝಾನ್ ಅಷ್ಟೇ ಮುಖ್ಯ, ಮೈಕ್ ಅಲ್ಲ ಎಂದು ಹೇಳಿದ್ದಾರೆ.

ಇನ್ನು ರಾಜ್ಯದಲ್ಲಿ ಆಝಾನ್ ಕುರಿತಾಗಿ ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಮಸೂದ್, ಮುತಾಲಿಕ್ ಓರ್ವ ಟೆರರಿಸ್ಟ್, ಅವನನ್ನೇ ಪಾಕಿಸ್ತಾನಕ್ಕೆ ಓಡಿಸಬೇಕು ಎಂದಿದ್ದಾರೆ. ಮುತಾಲಿಕನದ್ದು ರಾಮಸೇನೆಯಲ್ಲ, ರಾವಣ ಸೇನೆ, ಉಡುಪಿ ಜಿಲ್ಲೆಯಲ್ಲಿ ಮುತಾಲಿಕ್’ಗೆ ನಿಷೇಧಿಸಲಾಗಿತ್ತು ಆದರೆ ಮಂಗಳೂರಿನಲ್ಲಿ ಪೊಲೀಸ್ ಕಮೀಷನರ್ ಅವನ ಜೊತೆ ಕುರ್ಚಿ ಬಿಟ್ಟು ಎದ್ದು ಮಾತನಾಡುತ್ತಾರೆ, ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಝಾನ್ ವಿಚಾರವನ್ನು ವಿರೋಧಿಸಲು ಬಂದವರಿಗೆ ದನದ ಹಾಲನ್ನು ನೀಡಿ ಸ್ವಾಗತಿಸಿ, ನಮ್ಮ‌ ಮುಂದಿನ ಜನಾಂಗಕ್ಕೆ ಶಾಂತಿ ಅಗತ್ಯವಿದೆ ಎಂದು ಕೆ ಎಸ್ ಮಸೂದ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬಾಷಾ ತಂಙಳ್ ಉಪಸ್ಥಿತರಿದ್ದರು.

Join Whatsapp
Exit mobile version