ಹುಬ್ಬಳ್ಳಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಹತ್ಯೆ ತನಿಖೆಯ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಪೊಲೀಸರು ಏನು ಕಾನೂನು ಕ್ರಮ ಕೈಗೊಳ್ಳಬೇಕೋ ಅದನ್ನು ಅವರು ಮಾಡುತ್ತಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆ ನಡೆದಾಗ ಯಾರೂ ಕೂಡ ತಾರತಮ್ಯ ಮಾಡಲು ಹೋಗುವುದಿಲ್ಲ. ಪೊಲೀಸರು ಆರೋಪಿಗಳನ್ನು ಬಂಧಿಸುವ ಕೆಲಸವನ್ನು ಸ್ವಾಭಾವಿಕವಾಗಿ ಮಾಡುತ್ತಾರೆ. ಇದರಲ್ಲಿ ತಾರತಮ್ಯದ ಪ್ರಶ್ನೆಯೇ ಬರುವುದಿಲ್ಲ ಎಂದರು.
ನಂದಿ ಮಹಾರಾಜರ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕೆಂದು ಒತ್ತಾಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಪೊಲೀಸ್ ಇಲಾಖೆಯವರು ಸಮರ್ಥರಿದ್ದಾರೆ. ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಪ್ರಕರಣದ ಉನ್ನತ ತನಿಖೆ ಆರಂಭ ಆಗಿದೆ. ಈ ಪ್ರಕರಣವನ್ನು ಸಿಬಿಐ ಅಥವಾ ಯಾವುದಕ್ಕೂ ಕೊಡುವ ಅಗತ್ಯ ಇಲ್ಲ. ನಮ್ಮ ಇಲಾಖೆ ಪ್ರಕರಣದ ತನಿಖೆ ನಡೆಸಿದ ಬಳಿಕ ಸತ್ಯಾಸತ್ಯತೆ ತಿಳಿದು ಬರಲಿದೆ ಎಂದರು.