ನವದೆಹಲಿ: ಬಿಜೆಪಿಯು ಧಾರ್ಮಿಕ ಆಧಾರದ ಹೆಸರು ಮತ್ತು ಚಿಹ್ನೆಯ ಪಕ್ಷಗಳನ್ನು ನಿಷೇಧಿಸಲು ಕೋರಿದೆ. ಬಿಜೆಪಿಯ ಕಮಲ ಕೂಡ ಧಾರ್ಮಿಕ ಚಿಹ್ನೆ ಆಗಿರುವುದರಿಂದ ಅದಕ್ಕೂ ಇದನ್ನು ಅನ್ವಯಿಸಬೇಕು ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷವು ಸರ್ವೋಚ್ಚ ನ್ಯಾಯಾಲಯದ ಮುಂದೆ ವಾದಿಸಿದೆ.
ಮುಸ್ಲಿಂ ಲೀಗ್ ಪರ ಹಾಜರಾದ ವಕೀಲ ದುಷ್ಯಂತ್ ದವೆಯವರು ಕಮಲ ಹಿಡಿದಿರುವ ಬಿಜೆಪಿಯ ಸಹಿತ ದೊಡ್ಡ ಪಟ್ಟಿಯನ್ನೇ ನಾವು ಸುಪ್ರೀಂ ಕೋರ್ಟಿಗೆ ನೀಡಿದ್ದೇವೆ ಎಂದರು.
ಜಸ್ಟಿಸ್ಗಳಾದ ಎಂ. ಆರ್. ಶಾ ಮತ್ತು ಸಿ. ಟಿ. ರವಿಕುಮಾರ್ ಅವರಿದ್ದ ಪೀಠದ ಎದುರು ದವೆ ವಾದ ಮಂಡಿಸಿದರು. ಕಮಲವು ಹಿಂದೂ, ಬೌದ್ಧ ಎರಡೂ ಧರ್ಮಗಳಲ್ಲಿ ಧಾರ್ಮಿಕ ಚಿಹ್ನೆ ಎಂದು ಅವರು ಹೇಳಿದರು. ಶಿವಸೇನೆ, ಶಿರೋಮಣಿ ಅಕಾಲಿ ದಳ, ಹಿಂದೂ ಸೇನಾ, ಹಿಂದೂ ಮಹಾಸಭಾ, ಕ್ರಿಶ್ಚಿಯನ್ ಡೆಮಾಕ್ರಟಿಕ್ ಫ್ರಂಟ್, ಇಸ್ಲಾಂ ಹಿಂದ್ ಪಾರ್ಟಿ ಮೊದಲಾದ 26 ಪಕ್ಷಗಳ ಪಟ್ಟಿಯನ್ನು ದವೆ ಪೀಠದ ಮುಂದಿಟ್ಟಿದ್ದಾರೆ.
“ಹಿಂದೂ ಧರ್ಮದಂತೆ ಪ್ರತಿಯೊಬ್ಬ ಮನುಷ್ಯನೂ ತಾವರೆಯ ಪವಿತ್ರ ಆತ್ಮ ಆಗಿದ್ದಾನೆ. ಜೀವ ಚಿಹ್ನೆಯಾದ ಸದಾ ಯೌವನದಾಯಿ ತಾವರೆಯು ಪವಿತ್ರತೆ, ಶುದ್ಧ ದೈವೀ ಸಂಕೇತವಾಗಿದೆ. ಕಣ್ಣಿನ ಸಹಿತ ಹೆಣ್ಣನ್ನು ವರ್ಣಿಸಲು ತಾವರೆ ಬಳಕೆಯಾಗುತ್ತದೆ. ಬೌದ್ಧರಿಗೆ ತಾವರೆಯು ಬುದ್ಧ ಪ್ರಬುದ್ಧತೆ. ತಲೆಯು ಎತ್ತರಕ್ಕೆ, ಶುದ್ಧ ಸೂರ್ಯ ತಪಸ್ವಿ, ಅದರ ಕಾಲು ಅನುಭವದಲ್ಲಿ ಊರಿದೆ. ಹಿಂದೂ ಧರ್ಮದಂತೆ ಬ್ರಹ್ಮ, ಶಿವ, ವಿಷ್ಣು, ಲಕ್ಷ್ಮಿಯರು ಸಹ ತಾವರೆ ಸಂಬಂಧಿತರು” ಐಯುಎಂಎಲ್ ವಿವರ ನೀಡಿದೆ.
ಈಗ ಜಿತೇಂದ್ರ ನಾರಾಯಣ ಸಿಂಗ್ ಆಗಿರುವ ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷರಾಗಿದ್ದ ಸಯ್ಯದ್ ವಸೀಂ ರಿಜ್ವಿಯವರು ಐಯುಎಂಎಲ್ ಮತ್ತು ಎಐಎಂಐಎಂ- ಆಲ್ ಇಂಡಿಯಾ ಮಜ್ಲಿಸ್ ಎ ಇತ್ತಿಹಾದುಲ್ ಮುಸ್ಲಿಮೀನ್ ಎರಡು ಪಕ್ಷದ ಹೆಸರು ಮಾತ್ರ ಸೂಚಿಸಿ ಸುಪ್ರೀಂ ಕೋರ್ಟ್ನಲ್ಲಿ ಪಿಐಎಲ್- ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರ ಸರಿಯಾಗಿ ಪಟ್ಟಿ ಮಾಡದೆ ಆರಿಸಿ ಹೇಳಿದ್ದಾರೆ ಎನ್ನುವುದು ಮೊದಲ ವಿಚಾರಣೆಯಲ್ಲಿ ಸ್ಪಷ್ಟವಾಗಿತ್ತು.
ಮಂಗಳವಾರ ಮಾಜಿ ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್ ಅವರು ಎಐಎಂಐಎಂ ಪರ ಹಾಜರಾಗಿ ಅರ್ಜಿಯು 32ನೇ ವಿಧಿ ಅನುಸರಿಸಿ ಇಲ್ಲ ಎಂದರು. ಬರೇ ಎರಡು ಪಕ್ಷದ ಪೂರ್ವಗ್ರಹ ಪೀಡಿತ ಹೆಸರು ನೀಡಿರುವುದರಿಂದ ಪಿಐಎಲ್ ವಜಾ ಮಾಡುವಂತೆ ವೇಣುಗೋಪಾಲ್ ಕೋರಿದರು. ಇದೇ ಮಾದರಿಯ ಒಂದು ಪ್ರಕರಣ ದಿಲ್ಲಿಯ ಉಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವುದಾಗಿಯೂ ಅವರು ಹೇಳಿದರು.