ಎನ್ರಿಕಾ ಲೆಕ್ಸಿ ಪ್ರಕರಣ | ಕೇರಳದ ಮೀನುಗಾರರ ಕುಟುಂಬಕ್ಕೆ 10 ಕೋಟಿ ಪರಿಹಾರ ನೀಡಿದ ಇಟಲಿ

Prasthutha|

ಹೊಸದಿಲ್ಲಿ : ಕೇರಳದ ಮೀನುಗಾರರ ಕುಟುಂಬಕ್ಕೆ 10 ಕೋಟಿ ರೂ. ಪರಿಹಾರ ನೀಡುವುದಾಗಿ ಇಟಲಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಇಟಲಿಯ ನೌಕಾಪಡೆಯ ಇಬ್ಬರು ನಾವಿಕರಾದ ಮಾಸ್ಸಿಮಿಲಾನೊ ಲ್ಯಾಟೊರೆ ಹಾಗೂ ಸಾಲ್ವಟೋರ್ ಗಿರೋನ್ ವಿರುದ್ಧ ಭಾರತದಲ್ಲಿ ಇರುವ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ಆದೇಶಗಳನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದ್ದು, ಮಂಗಳವಾರ ಆದೇಶ ಹೊರಡಿಸಲಿದೆ.  

- Advertisement -

ರಿಪಬ್ಲಿಕ್ ಆಫ್ ಇಟಲಿ ಪರಿಹಾರದ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ಜಮಾ ಮಾಡಿದೆ ಎಂದು ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಪೀಠಕ್ಕೆ ಮಾಹಿತಿ ನೀಡಿದ್ದಾರೆ.

ಕೇರಳ ಕರಾವಳಿಯ ಬಳಿ 2012 ರ ಸಮುದ್ರದಲ್ಲಿ ಗುಂಡು ಹಾರಿಸಿದ ಘಟನೆಯಲ್ಲಿ ಇಬ್ಬರು ಭಾರತೀಯ ಮೀನುಗಾರರು ಮೃತಪಟ್ಟಿದ್ದರು.  2012 ರ ಸಂತ್ರಸ್ತರಿಗೆ ಇಟಲಿ ನೀಡಿರುವ 10 ಕೋಟಿ ರೂಪಾಯಿಗಳ ಪರಿಹಾರವನ್ನು ಸ್ವೀಕರಿಸಿದ ನಂತರ, ಇಟಾಲಿಯನ್ ನೌಕಾಪಡೆಗಳ ಇಬ್ಬರು ನಾವಿಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಅಂತ್ಯಗೊಳಿಸಲು ಕೋರಿ ಕೇಂದ್ರವು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಎಂ.ಆರ್.ಶಾ ಅವರ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿದೆ.

- Advertisement -

ರಿಪಬ್ಲಿಕ್ ಆಫ್ ಇಟಲಿ ಪರ ಹಾಜರಾದ ಹಿರಿಯ ವಕೀಲ ಸೊಹೈಲ್ ದತ್ತಾ, ಅಂತಾರಾಷ್ಟ್ರೀಯ ನ್ಯಾಯಮಂಡಳಿಯ ಪ್ರಕಾರ ಇಬ್ಬರು ಇಟಾಲಿಯನ್ ನಾವಿಕರ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವ ಆದೇಶವನ್ನು ಅಂಗೀಕರಿಸುವಂತೆ ನ್ಯಾಯಪೀಠವನ್ನು ಕೋರಿದರು.

ಘಟನೆ ಹಿನ್ನೆಲೆ: 2012ರ ಫೆಬ್ರವರಿಯಲ್ಲಿ ಇಟಲಿಯ ತೈಲ ಟ್ಯಾಂಕರ್ ಎಂವಿ ಎನ್ರಿಕಾ ಲೆಕ್ಸಿಯಲ್ಲಿ ಬಂದಿದ್ದ ಇಟಲಿಯ ನಾವಿಕರಾದ ಸಾಲ್ವಟೊರ್ ಗಿರೊನ್ ಮತ್ತು ಮಾಸ್ಸಿಮಿಲಿಯಾನೊ ಲಾಟೊರ್ರೆ, ಭಾರತದ ಪ್ರತ್ಯೇಕ ಆರ್ಥಿಕ ವಲಯದಲ್ಲಿ (ಇಇಝೆಡ್) ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇಬ್ಬರು ಮೀನುಗಾರರನ್ನು ಹತ್ಯೆ ಮಾಡಿದ್ದರು.

ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಒಳಗಾಗಿತ್ತು. ಸಾಲ್ವೊಟೊರ್ ಗಿರೋನ್ 2014ರ ಆಗಸ್ಟ್ 31ರಂದು ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿದ್ದರು. ಹೀಗಾಗಿ ಅವರಿಗೆ ಜಾಮೀನು ನೀಡಿ ಇಟಲಿಗೆ ತೆರಳಲು ಅವಕಾಶ ನೀಡಲಾಗಿತ್ತು.

ಇಟಲಿಯಲ್ಲಿ ಅವರು ಹೃದಯ ಚಿಕಿತ್ಸೆಗೆ ಕೂಡ ಒಳಗಾಗಿದ್ದರು. 2016ರ ಮೇ 26ರಂದು ಮಾಸ್ಸಿಮಿಲಿಯಾನೊ ಲಾಟೊರ್ರೆಗೆ ಜಾಮೀನು ನೀಡಿದ್ದ ನ್ಯಾಯಾಲಯ, ಅವರನ್ನೂ ಇಟಲಿಗೆ ಮರಳಲು ಅವಕಾಶ ನೀಡಿತ್ತು.

Join Whatsapp