Home ಟಾಪ್ ಸುದ್ದಿಗಳು 1992ರ ಬಾಬರಿ ಮಸೀದಿ ಧ್ವಂಸ ಮಾದರಿಯಲ್ಲೇ, 2022ರಲ್ಲಿ ಕಾಶಿಯ ಜ್ಞಾನವಾಪಿ ಧ್ವಂಸ: ಬಿಜೆಪಿ ನಾಯಕನ ವಿವಾದಾತ್ಮಕ...

1992ರ ಬಾಬರಿ ಮಸೀದಿ ಧ್ವಂಸ ಮಾದರಿಯಲ್ಲೇ, 2022ರಲ್ಲಿ ಕಾಶಿಯ ಜ್ಞಾನವಾಪಿ ಧ್ವಂಸ: ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ

ವಾರಾಣಾಸಿ: 1992ರಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ ಮಾದರಿಯಲ್ಲೇ ವಾರಣಾಸಿಯ ಕಾಶಿ ವಿಶ್ವನಾಥ್ ದೇವಸ್ಥಾನದ ಪಕ್ಕದಲ್ಲಿರುವ ಐತಿಹಾಸಿಕ ಜ್ಞಾನವಾಪಿ ಮಸೀದಿಯನ್ನು ಕೆಡವಲಾಗುವುದು ಎಂದು ಬಿಜೆಪಿ ನಾಯಕ ಸಂಗೀತ್ ಸೋಮ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮೀರತ್ ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಸಂಗೀತ್ ಸೋಮ್, 1992ರಲ್ಲಿ ಬಾಬರೀ ಮಸೀದಿಯನ್ನು ಕೆಡವಲಾಗಿದ್ದು, ಇದೀಗ ಈಗ ಜ್ಞಾನವಾಪಿ ಮಸೀದಿಯ ಸರದಿ. 2022ರಲ್ಲಿ ಅದನ್ನು ಕೆಡವುತ್ತೇವೆ ಎಂದು ತಿಳಿಸಿದ್ದಾರೆ.

ಮುಸ್ಲಿಮ್ ದಾಳಿಕೋರರು ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಿದ್ದಾರೆ. ಈಗ ಅದನ್ನು ಸರಿಪಡಿಸುವ ಸಮಯ ಬಂದಿದೆ ಎಂದು 2013ರ ಮುಝಫರ್ ನಗರ ಗಲಭೆ ಪ್ರಕರಣದ ಆರೋಪಿಯೂ ಆಗಿರುವ ಸಂಗೀತ್ ಸೋನು ಹೇಳಿದ್ದಾರೆ.

ಬಾಬರೀ ಮಸೀದಿ ಕೆಡವಿದ ದಿನವೇ ಮುಸ್ಲಿಮರಿಗೆ ಜ್ಞಾನವಾಪಿ ಮಸೀದಿ ಧ್ವಂಸದ ಬಗ್ಗೆ ಗೊತ್ತಿರಬೇಕಿತ್ತು. ದೇಶ ಯಾವ ದಾರಿಯಲ್ಲಿ ಸಾಗುತ್ತಿದೆ ಎಂಬುದು ಅವರಿಗೆ ತಿಳಿದಿರಬೇಕಿತ್ತು. ನಾವು ಅಂತಹ ಯಾವುದೇ ವಿವಾದಾತ್ಮಕ ಮಸೀದಿಯನ್ನು ಒಪ್ಪುವುದಿಲ್ಲ. ಮುಂದಿನ ದಿನಗಳಲ್ಲಿ ಅವೆಲ್ಲವನ್ನೂ ಕೆಡವುತ್ತೇವೆ ಎಂದು ಹೇಳಿದ್ದಾರೆ.

ರಾಮಲಲ್ಲಾ ( ರಾಮನ ವಿಗ್ರಹ) ಹಲವಾರು ವರ್ಷಗಳ ಕಾಲ ಟರ್ಪಾಲಿನಲ್ಲಿ ಉಳಿಯಬೇಕಾಗಿತ್ತು. ಆದರೆ ಈಗ ಭವ್ಯವಾದ ರಾಮಮಂದಿರವನ್ನು ನಿರ್ಮಿಸಲಾಗುತ್ತಿದೆ. ಇಂದು ಬಾಬರೀ ಮಸೀದಿಯ ಒಂದು ಇಟ್ಟಿಗೆಯೂ ಉಳಿದಿಲ್ಲ. ಮುಂದಕ್ಕೆ ಜ್ಞಾನವಾಪಿ ಮಸೀದಿಗೂ ಅದೇ ಗತಿ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಕಾಶಿ ವಿಶ್ವನಾಥ ಸಂಕೀರ್ಣದ ಸಮೀಪದಲ್ಲಿರುವ ಜ್ಞಾನವಾಪಿ ಮಸೀದಿಯೊಳಗೆ ದೇಗುಲದ ಪುರಾವೆಗಳಿವೆ ಎಂದು ತಿಳಿದಿದ್ದರಿಂದ ಮುಸ್ಲಿಮರು ಉದ್ದೇಶಪೂರ್ವಕವಾಗಿ ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Join Whatsapp
Exit mobile version