ಮುಂಬೈ: 2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಬಿಡುಗಡೆ ಕೋರಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ಬಾಂಬೆ ಹೈಕೋರ್ಟ್, ಬಾಂಬ್ ಸ್ಫೋಟ ಮತ್ತು ಅದರಲ್ಲಿ ಆರು ಜನರು ಸಾವಿಗೀಡಾಗುವಂತೆ ಮಾಡಿರುವುದು ಸರ್ಕಾರಿ ಕರ್ತವ್ಯವೇ ಎಂದು ಕಿಡಿಕಾರಿದೆ.
ಪೀಠದಲ್ಲಿದ್ದ ನ್ಯಾಯಾಧೀಶರಾಗಿದ್ದ ಅಜಯ್ ಗಡ್ಕರಿ ಮತ್ತು ಪಿ. ಡಿ. ನಾಯ್ಕ್ ಅವರು ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ಪುರೋಹಿತ್’ಗೆ, ಪುರೋಹಿತ್’ರ ಕರ್ತವ್ಯಕ್ಕೂ ಸ್ಫೋಟಕ್ಕೂ ಯಾವುದೇ ಅಧಿಕೃತ ಸಂಬಂಧವಿಲ್ಲ. ಎರಡೂ ಬೇರೆ ಬೇರೆ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದೆ.
2008ರ ಸೆಪ್ಟೆಂಬರ್ 29ರ ಮಾಲೆಗಾಂವ್ ಬೈಕ್ ಬಾಂಬ್ ಸ್ಫೋಟದಲ್ಲಿ ಆರು ಜನರು ಸಾವಿಗೀಡಾದರೆ ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
“ಆರೋಪಿಯು ಸಶಸ್ತ್ರ ಪಡೆಯ ಸೇವೆಯಲ್ಲಿರುವ ಅಧಿಕಾರಿಯಾಗಿದ್ದರೂ ಸೇನೆಯಲ್ಲಿ ಅನುಮತಿ ಪಡೆಯದೆಯೇ ಅಭಿನವ ಭಾರತ ಸಂಸ್ಥೆಯನ್ನು ಸ್ಥಾಪಿಸಿದ್ದರು. ಅಲ್ಲದೆ ಪುರೋಹಿತರು ಅದಕ್ಕೆ ನಿಧಿ ಸಂಗ್ರಹಿಸಲು ಕೂಡ ಅನುಮತಿ ಪಡೆದಿರಲಿಲ್ಲ. ಸಂಗ್ರಹಿಸಿದ ನಿಧಿಯನ್ನು ಕಾನೂನು ಬಾಹಿರ ಚಟುವಟಿಕೆಯಲ್ಲಿ ಬಳಸಲು ಸ್ಫೋಟಕ ಹಾಗೂ ಆಯುಧ ಖರೀದಿಗೆ ನೀಡಿದ್ದಾರೆ. ಆರೋಪಿಯು ಇತರ ಆರೋಪಿಗಳೊಂದಿಗೆ ಸಾಕಷ್ಟು ಬಾರಿ ಕುಳಿತು ಚರ್ಚಿಸಿದ್ದಾನೆ. ಕಾನೂನು ಬಾಹಿರ ಚಟುವಟಿಕೆಯ ಯೋಜನೆಗಳನ್ನು ಹಾಕಿದ್ದಾರೆ” ಎಂದೂ ಹೈಕೋರ್ಟ್ ಹೇಳಿದೆ.
ಪುರೋಹಿತ್ ಮಿಲಿಟರಿ ಇಂಟೆಲಿಜೆನ್ಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಸೇನೆಯ ಬೇಹುಗಾರಿಕಾ ವಿಭಾಗದಲ್ಲಿ ಗುಪ್ತ ಮಾಹಿತಿ ಸಂಗ್ರಹ ಅವರ ವೃತ್ತಿ. ಮುಂದೆ ಅಪರಾಧ ದಂಡ ಸಂಹಿತೆಯ 197ನೇ ವಿಧಿ ಪ್ರಕಾರ ಪುರೋಹಿತ್ ಮೇಲೆ ಮೊಕದ್ದಮೆ ದಾಖಲಾದುದರಿಂದ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಎನ್’ಐಎ- ರಾಷ್ಟ್ರೀಯ ತನಿಖಾ ದಳದ ಕೋರ್ಟಿನಲ್ಲಿ ಕ್ರಿಮಿನಲ್ ಕೃತ್ಯಕ್ಕಾಗಿ ಪುರೋಹಿತ್ ವಿಚಾರಣೆ ಎದುರಿಸುತ್ತಿದ್ದಾರೆ. ಭಾರತೀಯ ದಂಡ ಸಂಹಿತೆಯ ಯುಎಪಿಎ- ಕಾನೂನುಬಾಹಿರ ಚಟುವಟಿಕೆ ತಡೆ ಉಗ್ರ ನಿಗ್ರಹ ಕಾಯ್ದೆಯಡಿ ಪ್ರಕರಣ ಬಂಧಿರುವುದರಿಂದ ಕಠಿಣ ಶಿಕ್ಷೆ, ಮರಣ ದಂಡನೆಯವರೆಗೂ ಶಿಕ್ಷೆ ಆಗಲು ಅವಕಾಶವಿದೆ.
2017ರ ಡಿಸೆಂಬರ್’ನಲ್ಲಿ ಎನ್’ಐಎ ಟ್ರಯಲ್ ಕೋರ್ಟ್ ಪುರೋಹಿತರ ಬಿಡುಗಡೆ ನಿರಾಕರಿಸಿದ ಬಳಿಕ 2018ರಲ್ಲಿ ಅವರು ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಅವರು ಅಭಿನವ ಭಾರತಕ್ಕಾಗಿ ಮಾಹಿತಿ ಸಂಗ್ರಹಿಸುತ್ತಿದ್ದರು. ಅವರನ್ನು ಅವರ ಮೇಲಿನವರು ಬದಿಗೆ ಸರಿಸಿದ್ದರು ಎಂದು ಪುರೋಹಿತರ ವಕೀಲರಾದ ನೀಲಾ ಗೋಖಲೆ ವಾದಿಸಿದ್ದರು.
ಪುರೋಹಿತ್ ಬರೇ ಸುದ್ದಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರೆ ಮುಗ್ಧರಾದ ಆರು ಜನ ನಾಗರಿಕರ ಸಾವಿಗೆ ಮತ್ತು 100ಕ್ಕೂ ಹೆಚ್ಚು ಜನರು ಗಾಯಗೊಂಡ ಬೈಕ್ ಬಾಂಬನ್ನು ತಡೆಯುವ, ತೆಗೆದು ಹಾಕುವ ಕೆಲಸವನ್ನು ಏಕೆ ಮಾಡಲಿಲ್ಲ ಎಂದು ಬಾಂಬೆ ಹೈ ಕೋರ್ಟ್ ವಕೀಲರನ್ನು ಪ್ರಶ್ನಿಸಿತು. “ಅಲ್ಲದೆ ಬಾಂಬ್ ಸ್ಫೋಟಿಸುವುದು ಸೇನೆಯಲ್ಲಿದ್ದ ಪುರೋಹಿತ್’ರ ಅಧಿಕೃತ ವೃತ್ತಿಯೂ ಆಗಿರಲಿಲ್ಲ” ಎಂದೂ ಕೋರ್ಟ್ ಹೇಳಿತು.
ಸೇನೆಯ ಕರ್ತವ್ಯವನ್ನು ಬಿಟ್ಟು ಪುರೋಹಿತ್ ಅನ್ಯ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿದ್ದ ಒಂದು ಸಂಗತಿಯೇ ಅವರನ್ನು ಶಿಕ್ಷಿಸಲು ಸಾಕು, ಅದಕ್ಕಾಗಿಯೇ ಅವರ ಬಿಡುಗಡೆ ಮನವಿಯನ್ನು ಎನ್’ಐಎ ಟ್ರಯಲ್ ಕೋರ್ಟ್ ಪುರಸ್ಕರಿಸಿರಲಿಲ್ಲ ಎಂದು ಎನ್’ಐಎ ವಕೀಲರಾದ ಸಂದೇಶ್ ಪಟೇಲ್ ಅವರು ಕೋರ್ಟಿಗೆ ತಿಳಿಸಿದರು.
ಮಾಲೆಗಾಂವ್ ಸ್ಫೋಟ ಪ್ರಕರಣದ ಏಳು ಆರೋಪಿಗಳಲ್ಲಿ ಒಬ್ಬರಾದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ತನ್ನ ಬಿಡುಗಡೆಗೆ ಬಾಂಬೆ ಹೈಕೋರ್ಟಿಗೆ ಮಾಡಿದ್ದ ಮನವಿಯನ್ನು 2022ರಲ್ಲಿ ಹಿಂಪಡೆದುಕೊಂಡರು. ಸಹ ಆರೋಪಿ ಸಮೀರ್ ಕುಲಕರ್ಣಿ ಸಹ ಮನವಿ ಹಿಂಪಡೆದಿದ್ದಾರೆ. 2017ರ ಡಿಸೆಂಬರ್’ನಲ್ಲಿ ಎನ್’ಐಎ ಟ್ರಯಲ್ ಕೋರ್ಟ್ ಅವರು ಬಿಡುಗಡೆ ಕೋರಿದ ಮನವಿಯನ್ನು ತಿರಸ್ಕರಿಸಿದ ಬೆನ್ನಿಗೆ 2018ರಲ್ಲಿ ಪುರೋಹಿತರಂತೆಯೇ ಹೈ ಕೋರ್ಟಿನಲ್ಲಿ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ್ದರು.