Home ಟಾಪ್ ಸುದ್ದಿಗಳು ನಗರವಾಸಿಗಳು, ಪಟ್ಟಣವಾಸಿಗಳು ಕಾಂಗ್ರೆಸ್ ಪರ ಎಂಬುದು ಸ್ಪಷ್ಟ: ಡಿ.ಕೆ.ಶಿವಕುಮಾರ್

ನಗರವಾಸಿಗಳು, ಪಟ್ಟಣವಾಸಿಗಳು ಕಾಂಗ್ರೆಸ್ ಪರ ಎಂಬುದು ಸ್ಪಷ್ಟ: ಡಿ.ಕೆ.ಶಿವಕುಮಾರ್

ಬೆಂಗಳೂರು; ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದರ ಹಿಂದೆ ರಾಜ್ಯದ ಜನರ ಅಭಿಪ್ರಾಯ ಅಡಗಿದೆ. ಅದರಲ್ಲೂ ನಗರವಾಸಿಗಳು, ಪಟ್ಟಣವಾಸಿಗಳ ಅಭಿಪ್ರಾಯ ಕಾಂಗ್ರೆಸ್ ಪರ ವಾಲುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

 ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಶಾಸಕರಿರುವ ಕಡೆ ಆಡಳಿತ ಪಕ್ಷಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚಿನ ಶಕ್ತಿ ಇರುತ್ತದೆ. ಬಿಜೆಪಿ ಆಡಳಿತ ಪಕ್ಷವಾಗಿದ್ದು. ಬಿಜೆಪಿ ಶಾಸಕರಿದ್ದರೂ ಜನರು ಮಾತ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ನಿಂತಿದ್ದಾರೆ. ಇದು ರಾಜ್ಯದ ಜನರ ಭಾವನೆ ಯಾವ ರೀತಿ ಇದೆ ಎಂಬುದಕ್ಕೆ ಸಾಕ್ಷಿ ಎಂದರು.

 ಇದು ಮುಂಬರುವ ವಿಧಾನಸಭೆ ಚುನಾವಣೆ ದಿಕ್ಸೂಚಿಯೇ ಎಂಬ ಪ್ರಶ್ನೆಗೆ, ‘ಮಾಧ್ಯಮಗಳೇ ಇದನ್ನು ವಿಮರ್ಶೆ ಮಾಡಲಿ. ಆಡಳಿತ ಪಕ್ಷವಿದ್ದರೂ, ಶಾಸಕರು, ಮಂತ್ರಿಗಳ ಕ್ಷೇತ್ರದಲ್ಲಿ ಏನೇನಾಗಿದೆ, ಜನ ಯಾವ ರೀತಿ ತೀರ್ಪು ನೀಡುತ್ತಿದ್ದಾರೆ ಎಂಬುದನ್ನು ನೋಡಿ. ಜನರ ತೀರ್ಪನ್ನು ನಿರ್ಲಕ್ಷಿಸಿ ಸಬೂಬು ಹೇಳಲು ಬಿಜೆಪಿಗೆ ಸಾಧ್ಯವಿಲ್ಲ. ಜನ ನಮ್ಮ ಮೇಲೆ ವಿಶ್ವಾಸ ಇಡುತ್ತಿದ್ದು, ಅವರ ನಿರೀಕ್ಷೆಯಂತೆ ನಡೆಯಬೇಕಾಗುತ್ತದೆ ಎಂದು ಹೇಳಿದರು.

 ಮೇಕೆದಾಟು ಪಾದಯಾತ್ರೆಗೆ ತಯಾರಿ ಮಾಡುತ್ತಿದ್ದು, ನಿತ್ಯ 1 ಗಂಟೆ ನಡೆಯುತ್ತಿದ್ದೇನೆ. ಕೆಲವರು ಟೋಪಿ ಹಾಕಿದರೆ ಹಾಕಿಸಿಕೊಳ್ಳೋಣ. ಎಲ್ಲ ಸಂಘಟನೆಗಳು, ಕಲಾವಿದರು, ಧಾರ್ಮಿಕ ಮುಖಂಡರು ವಿದ್ಯಾರ್ಥಿಗಳು, ಅಪಾರ್ಟ್ ಮೆಂಟ್ ನಿವಾಸಿಗಳು, ಎಲ್ಲ ವರ್ಗದವರನ್ನೂ ಆಹ್ವಾನಿಸುತ್ತಿದ್ದೇನೆ ಎಂದರು.

 ಯಾರು ಯಾವ ತಂತ್ರಗಾರಿಕೆ ಮಾಡುತ್ತಿದ್ದಾರೆ, ಯಾರು ದೆಹಲಿಗೆ ಹೋಗಿ ಏನೆಲ್ಲಾ ಮಾಡುತ್ತಿದ್ದಾರೆ, ಏನೆಲ್ಲಾ ಒತ್ತಡ ಹಾಕುತ್ತಿದ್ದಾರೆ, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯದಲ್ಲಿ ಏನೇನಾಗುತ್ತಿದೆ ಎಂದೆಲ್ಲಾ ನನಗೆ ಗೊತ್ತಿದೆ. ನಾನು ಮುಂಚೆ ಒಬ್ಬರ ವಿರುದ್ಧ ಹೋರಾಡಬೇಕಿತ್ತು, ಈಗ ಇಬ್ಬರ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಇರಲಿ ಮಾಡೋಣ ಎಂದರು.

 ಡಿ.ಕೆ. ಶಿವಕುಮಾರ್ ರಾಜಕೀಯ ಜೀವನದಲ್ಲಿ ದಳಪತಿಗಳ ವಿಚಾರವಾಗಿ 90 ರ ದಶಕ ಮತ್ತೆ ಮರುಕಳಿಸುತ್ತಿದೆಯೇ ಎಂಬ ಪ್ರಶ್ನೆಗೆ, ‘ನನಗೂ ದಳಪತಿಗಳಿಗೂ ಯಾವುದೇ ರೀತಿಯ ರಾಜಕಾರಣ ಇಲ್ಲ. ಕಾಂಗ್ರೆಸಿಗನಾಗಿ ಕಾಂಗ್ರೆಸ್ ವಿರುದ್ಧ ಇರುವ ಎಲ್ಲ ಪಕ್ಷಗಳ ವಿರುದ್ಧ ನಾನು ಹೋರಾಡುತ್ತೇನೆ. ಕೇವಲ ಒಂದು ವರ್ಗ, ಜಾತಿ ವಿರುದ್ಧದ ಮೇಲೆ ನನ್ನ ಹೋರಾಟವಿಲ್ಲ ಎಂದರು.

 ಹಿಂದೂ ದೇವಾಲಯಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಯಿಂದ ಹೊರಗಿಟ್ಟು, ಸ್ಥಳೀಯರ ನಿಯಂತ್ರಣಕ್ಕೆ ನೀಡುತ್ತಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ರಾಜ್ಯ ಸರ್ಕಾರ ಅತಿದೊಡ್ಡ ತಪ್ಪು ಮಾಡುತ್ತಿದೆ. ದೇವಾಲಯಗಳು ರಾಜ್ಯದ ಸಂಪತ್ತು. ಈ ದೇವಾಲಯಗಳಿಂದ ಸರಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ಸಂಗ್ರಹವಾಗುತ್ತದೆ. ಸರಕಾರದ ನಿಲುವು ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಹಿರಿಯ ನಾಯಕರ ಜತೆ ಚರ್ಚೆ ಮಾಡಿ ಅಂತಿಮ ನಿರ್ಧಾರಕ್ಕೆ ಬರುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

Join Whatsapp
Exit mobile version