►ಶಿವಮೊಗ್ಗದಲ್ಲಿ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಶಿವಮೊಗ್ಗ: ಭಾಷೆ ಕಲಿಕೆಯ ರಾಷ್ಟ್ರೀಯತೆಯ ಪರಿಣಾಮ ಅಡುಭಾಷೆಗಳ ಭಾವನೆಗಳು ಮಾರೆಯಾಗುತ್ತಿವೆ. ಇದು ಮಾನವೀಯ ಸಂಬಂಧಗಳ ವಿನಾಶಕ್ಕೂ ಕಾರಣವಾಗಿದೆ ಎಂದು ಡಾ.ಕೆಳದಿ ಗುಂಡಾ ಜೋಯಿಸ್ ಹೇಳಿದರು.
ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ನಡೆದ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಅಲಂಕರಿಸಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು‘ಅನ್ಯಭಾಷೆಗಳ ವ್ಯಾಮೋಹದಲ್ಲಿ ಪ್ರಸ್ತುತ ಮಾತೃಭಾಷೆಗಳನ್ನೇ ಕಡೆಗಣಿಸಲಾಗುತ್ತಿದೆ. ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿಲ್ಲ. ಕಾಡುಮೇಡುಗಳಲ್ಲಿ ವಾಸವಾಗಿರುವ ಬುಡಕಟ್ಟು ಜನಾಂಗದವರ ಅಡು ಭಾಷೆಗಳೂ ನಶಿಸುತ್ತಿವೆ. ಮಕ್ಕಳಿಗೆ ಒತ್ತಾಯದ ಮೂಲಕ ಅನ್ಯ ಭಾಷೆಗಳನ್ನು ಹೇರುವ ಕೆಲಸ ಇಂದು ಶಿಕ್ಷಣದ ಮೂಲಕ ಆಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ರಾಜಕಾರಣಿಗಳು ಶಿಕ್ಷಣ ಯಾವ ಮಾಧ್ಯಮದಲ್ಲಿ ಇರಬೇಕು ಎಂದು ತಿಳಿಯಲಾರದಷ್ಟು ದಡ್ಡರು. ನಮ್ಮನ್ನು ಆಳುವವರು, ಕನ್ನಡವನ್ನು ಅಳಿಸುತ್ತಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ದೂರಿದರು.
ಗಾಂಧಿ ವಿಚಾರಗಳನ್ನೂ ಹತ್ಯೆ ಮಾಡುವ ಮನಸ್ಸುಗಳು ನಮ್ಮ ಮಧ್ಯೆ ಇರುವುದು ಆತಂಕದ ಸಂಗತಿ ಎಂದು ಸಹ್ಯಾದ್ರಿ ಕಲಾ ಕಾಲೇಜು ಪ್ರಾಧ್ಯಾಪಕ ಡಾ.ಎಸ್. ಸಿರಾಜ್ ಅಹಮದ್ ಆತಂಕ ವ್ಯಕ್ತಪಡಿಸಿದರು.
ರಾಜಕಾರಣಿಗಳು ಸಮ್ಮೆಳನಕ್ಕೆ ಬರುವುದು ಬೇಡ. ಅವರಿಗೆ ಅವರದೇ ಆದ ಕೆಲಸವಿರುತ್ತದೆ. ಬರದೇ ಇರುವುದಕ್ಕೆ ಬೇಸರವೂ ಇಲ್ಲ. ಅವರ ಪಾಡಿಗೆ ಅವರು ಇರಲಿ. ಕನ್ನಡ ಕಟ್ಟುವ ಕೆಲಸ ನಮ್ಮದು. ನಮ್ಮ ಪಾಡಿಗೆ ನಾವು ಕನ್ನಡದ ಮನಸುಗಳ ಕಟ್ಟುತ್ತೇವೆ ಎಂದು ಸಾಹಿತಿ ನಾ.ಡಿಸೋಜ ಹೇಳಿದರು.
ನಮ್ಮ ಮಕ್ಕಳು ನಮ್ಮ ಭಾಷೆ ಕಲಿಯ ಬೇಕು. ಅಣ್ಣಾ ಎನ್ನುವ ಪದ ಇಂಗ್ಲಿಷ್ ಪದ ಕೋಶದಲ್ಲಿ ಸೇರಿದೆ. ಹಲವು ಭಾಷೆಗಳಿಗೆ ಕನ್ನಡವೇ ಸ್ಫೂರ್ತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಲವು ಸಾಹಿತಿಗಳ ಸಹಿತ ಗಣ್ಯಾತಿಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.