Home ಕರಾವಳಿ ಮಳಲಿ ಮಸೀದಿ ದೇವಸ್ಥಾನ ಆಗಿತ್ತು ಎಂಬುದು ಅಪ್ಪಟ ಸುಳ್ಳು ಸುದ್ದಿ: ಹೊರಗಿನವರು ಮಾಡಿರುವ ಕುತಂತ್ರ ಎಂದ...

ಮಳಲಿ ಮಸೀದಿ ದೇವಸ್ಥಾನ ಆಗಿತ್ತು ಎಂಬುದು ಅಪ್ಪಟ ಸುಳ್ಳು ಸುದ್ದಿ: ಹೊರಗಿನವರು ಮಾಡಿರುವ ಕುತಂತ್ರ ಎಂದ ಗ್ರಾಮಸ್ಥರು

►ಮೌನವಾಗಿದ್ದ ಗ್ರಾಮದಲ್ಲಿ ಅತಂಕ ಸೃಷ್ಟಿಸಿದ ಮಾಧ್ಯಮಗಳು

►ಇನ್ ಲ್ಯಾಂಡ್ ವೆಬ್ ಸೈಟಿನಲ್ಲಿ ಪ್ರಕಟವಾದ ಸುಳ್ಳು ವರದಿಯೇ ಸಮಸ್ಯೆಗೆ ಮೂಲ

ಮಂಗಳೂರು: ಮಂಗಳೂರಿನ ಹೊರವಲಯದ ಮಳಲಿ ದರ್ಗಾ ನವೀಕರಣ ವೇಳೆ ಹಿಂದೂ ಶೈಲಿಯ ದೇವಸ್ಥಾನ ಪತ್ತೆ ಎಂಬ ಸುದ್ದಿ ಕನ್ನಡ ಟಿವಿ ಮಾಧ್ಯಮ ಮತ್ತು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ತನ್ನ ಪಾಡಿಗೆ ತಾನಿದ್ದ ಮಳಲಿ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಮಂಗಳೂರು ನಗರ ಪೊಲೀಸರ ತಂಡ ಮಳಲಿ ಗ್ರಾಮಕ್ಕೆ ತೆರಳಿ ಮಸೀದಿ ಆವರಣದಲ್ಲಿ ಬೀಡುಬಿಟ್ಟಿದೆ.

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕು ಗುರುಪುರ ಹೋಬಳಿಯ ಮಳಲಿ (ಮಣೇಲ್) ಜುಮಾ ಮಸೀದಿ ಈಗ ಆತಂಕದ ಕೇಂದ್ರ ಬಿಂದು. ಅಮೆರಿಕನ್ ಕಂಪೆನಿ ಪೆಪ್ಸಿಕೊದ ಮಾಜಿ ಅಧ್ಯಕ್ಷೆ ಇಂದ್ರಾ ನೂಯಿ ಮತ್ತು ಬಂಟ್ವಾಳದ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಇದೇ ಊರಿನವರು. ಸ್ಥಳೀಯರು ಹೇಳುತ್ತಾರೆ ವಿವಾದ ಸೃಷ್ಟಿಸಿದವರು ಇಲ್ಲಿಯವರಲ್ಲ. ಗ್ರಾಮಸ್ಥರಿಗೆ ಈ ಮಸೀದಿ ವಿಷಯದಲ್ಲಿ ಯಾವ ಸಂಶಯವೂ ಇಲ್ಲ. ಎಲ್ಲರೂ ಸಾಮರಸ್ಯದ ಜೀವನ ಮಾಡುತ್ತಿದ್ದೇವೆ.

ವಿವಾದ ಸೃಷ್ಟಿ ಹೇಗೆ?

ಮೊದಲಿಗೆ ಫೇಸ್ ಬುಕ್, ಸೋಷಿಯಲ್ ಮಿಡಿಯಾದಲ್ಲಿ ಒಂದು ಪೋಸ್ಟ್ ಕಾಣಿಸಿಕೊಂಡಿತು. ಅನಂತರ ಬಜರಂಗದಳದ ಮುಖಂಡ ಶರಣ್ ಪಂಪ್ ವೆಲ್ ಅದೇ ರೀತಿಯ ಪೋಸ್ಟ್ ಮಾಡಿರುವುದು ಕಂಡುಬಂತು. ಅನಂತರ ಕನ್ನಡ ಟಿವಿ ಚಾನೆಲ್ ಗಳಲ್ಲಿ ಮತ್ತು ಕೆಲವು ಕನ್ನಡ ವೆಬ್ ಸೈಟ್ ಗಳಲ್ಲಿ ಸತ್ಯಕ್ಕೆ ದೂರವಾದ ಸುದ್ದಿಗಳು ಪ್ರಸಾರ ಆಗಿವೆ. ಇದರ ಬೆನ್ನಲ್ಲೇ ಜಿಲ್ಲಾಡಳಿತದ ವತಿಯಿಂದ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅನಂತರ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಗ್ರಾಮಕ್ಕೆ ಭೇಟಿ ನೀಡಿ ಪೊಲೀಸ್ ಬಂದೋ ಬಸ್ತ್ ನಿಯೋಜಿಸಿದ್ದಾರೆ.

ಕೆಲವು ಮಾಧ್ಯಮಗಳು ದರ್ಗಾದ ಮುಂಭಾಗವನ್ನು ತೆರವುಮಾಡಿದಾಗ ದೇವಸ್ಥಾನದ ಕುರುಹು ಬೆಳಕಿಗೆ ಬಂದಿದೆ ಎಂದು ವರದಿ ಮಾಡಿವೆ. ನಮ್ಮ ಪ್ರತಿನಿಧಿ ಸ್ಥಳಕ್ಕೆ ಭೇಟಿ ನೀಡಿದಾಗ ಜುಮಾ ಪ್ರಾರ್ಥನೆಯ ಮಸೀದಿಯ ಪಕ್ಕದಲ್ಲೇ ಅಸಯ್ಯದ್ ಅಬ್ದುಲ್ಲ ಮದನಿ ದರ್ಗಾ ಇದ್ದು ಅದನ್ನು ಕೆಡವಲಾಗಿಲ್ಲ. ಮಸೀದಿಯನ್ನು ನವೀಕರಣ ಮಾಡಲು ಬೇಕಾಗಿ ಏಪ್ರಿಲ್ 20ರಂದು ಕೆಡವುವ ಕೆಲಸ ಆರಂಭಿಸಲಾಗಿತ್ತು. ಏಪ್ರಿಲ್ 21ರಂದು ಫೇಸ್ ಬುಕ್ ನಲ್ಲಿ Inland letter ಎಂಬ ವೆಬ್ ಸೈಟಿನಲ್ಲಿ ಪ್ರಕಟವಾಗಿದ್ದ “ಮಳಲಿ ದರ್ಗಾದ ಪಕ್ಕ ನಿಗೂಢವಾಗಿ ಉಳಿದಿದ್ದ ದೇವಸ್ಥಾನದ ಗುಡಿ ಪತ್ತೆ’’ ಎಂಬ ಸುದ್ದಿಯನ್ನು ಶೇರ್ ಮಾಡಲಾಗಿದೆ. ಈ ಪೋಸ್ಟನ್ನು ಪದ್ಮನಾಭ ಕುಲಾಲ್ ಮಳಲಿ ಸಹಿತ ಮೂರು ಮಂದಿ ಲೈಕ್ ಮಾಡಿದ್ದು, ಒಬ್ಬರು ಶೇರ್ ಮಾಡಿದ್ದರು. ವೆಬ್ ಸೈಟಿನಲ್ಲಿ ಫೋಟೊವೊಂದು ಪ್ರಕಟವಾಗಿದ್ದು ಅದನ್ನು ವಿವೊ ಎಸ್ 1 ಮೊಬೈಲ್ ನಲ್ಲಿ ಏಪ್ರಿಲ್ 21ರಂದು 7.57ಕ್ಕೆ ಸೆರೆ ಹಿಡಿಯಲಾಗಿದೆ. ಅದೇ ದಿನ ಬಜರಂಗದಳದ ಮುಖಂಡ ಶರಣ್ ಮತ್ತು ಮಂಗಳೂರು ತಹಶೀಲ್ದಾರ್ ಮಸೀದಿಗೆ ಭೇಟಿ ನೀಡಿದ್ದಾರೆ.

ಪೋಸ್ಟ್ ಕಾರ್ಡ್ ಅನ್ನು ಹೋಲುವ ಇನ್ ಲ್ಯಾಂಡ್ ವೆಬ್ ಸೈಟಿನಲ್ಲಿ ಪ್ರಕಟವಾದ ವರದಿಯ ಆಧಾರದಲ್ಲೇ ಇನ್ನಿತರ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿವೆ. ಅದೇ ದಿನ ಒಂದೆರಡು ಪ್ರಾದೇಶಿಕ ಕನ್ನಡ ಟಿವಿ ಚಾನೆಲ್ ಗಳ ಮಂಗಳೂರು ವರದಿಗಾರರು ಸ್ಥಳಕ್ಕೆ ಭೇಟಿ ನೀಡಿದ್ದು, ಮಸೀದಿಗೆ ಸಂಬಂಧಪಟ್ಟವರು ವಾಸ್ತವ ವಿಷಯವನ್ನು ಅವರ ಮುಂದೆ ಮಂಡಿಸಲು ಪ್ರಯತ್ನ ಮಾಡಿದ್ದರು. ಆದರೆ, ಟಿವಿ ಚಾನೆಲ್ ಗಳು “ನಾವು ಏನೇ ಹೇಳಿದರೂ ಅದನ್ನು ಬರೆಯದೆ ಮಸೀದಿಯಲ್ಲಿ ಗರ್ಭಗುಡಿ ಪತ್ತೆ “ ಎಂದು ಸತ್ಯಕ್ಕೆ ದೂರವಾದ ವಿಚಾರ ಬರೆದಿದ್ದಾರೆ ಎಂದು ಮಸೀದಿಯ ಪದಾಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಮಸೀದಿಯ ನವೀಕರಣ ಮಾಡುವ ವಿಚಾರದಲ್ಲಿ ನೀಲ ನಕ್ಷೆಯೊಂದಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳೆಪಾಡಿ ಅವರನ್ನು ಬಂಟ್ವಾಳದಲ್ಲಿ ಭೇಟಿ ಆಗಿ ಸಹಕಾರ ಕೋರಿದ್ದೇವೆ. ರಾಜೇಶ್ ನಾಯ್ಕ್ ಹಲವು ಬಾರಿ ಇದೇ ಮಸೀದಿಗೆ ಭೇಟಿ ನೀಡಿದ್ದಾರೆ. ಇತ್ತೀಚೆಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದ ವೇಳೆ ಕೂಡ ದರ್ಗಾ ಸಮಿತಿಗೆ ಆಹ್ವಾನ ಪತ್ರಿಕೆ ನೀಡಲಾಗಿತ್ತು ಎಂದು ಮಸೀದಿ ಪದಾಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ.

ನಾವು ಮಳಲಿ ಗ್ರಾಮದಲ್ಲಿ ಯಾವುದೇ ರಾಜಕೀಯ ಪಕ್ಷಗಳ ಹುನ್ನಾರಗಳಿಗೆ ಬಲಿಯಾಗದೆ ಅನೋನ್ಯವಾಗಿದ್ದೇವೆ. ದರ್ಗಾದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಉರೂಸ್ ಕಾರ್ಯಕ್ರಮದ ಸಂದರ್ಭದಲ್ಲಿ ಮಳಲಿ ಮತ್ತು ಸುತ್ತಮುತ್ತಲಿನ ಹಿಂದೂ ಬಾಂಧವರು ಭಾಗವಹಿಸಿ ಹರಕೆ ಕಾಣಿಕೆ ಹಾಕುತ್ತಾರೆ ಎನ್ನುತ್ತಾರೆ ದರ್ಗಾ ಸಮೀಪದ ನಿವಾಸಿ ರಝಾಕ್.

ತನ್ನ ತಂದೆಯವರು ಮಸೀದಿಯ ಉಸ್ತುವಾರಿ ಹೊಂದಿದ್ದ ಕಾಲದಿಂದಲೂ ಮಳಲಿಯಲ್ಲಿ ನಾವು ಎಲ್ಲ ಜಾತಿ ಧರ್ಮದವರು ಸಾಮರಸ್ಯದಿಂದ ಬಾಳುತ್ತಿದ್ದೇವೆ. ಈಗಲು ಅದೇ ರೀತಿ ಮುಂದುವರಿದು ಕೊಂಡು ಬಂದಿದೆ. ಇದು ಯಾರೋ ಹೊರಗಿನವರು ಮಾಡಿರುವ ಕುತಂತ್ರ ಎಂದು ಒಟ್ಟು ಘಟನೆಯ ಹಿನ್ನೆಲೆಯನ್ನು ಬಿಚ್ಚಿಡುತ್ತಾರೆ ರಝಾಕ್.

ಉರೂಸ್ ಸಂದರ್ಭದಲ್ಲಿ ದರ್ಗಾಕ್ಕೆ ಮುಸ್ಲಿಮರ ಕಾರ್ಯಕ್ರಮಗಳಿಗೆ ಮುನ್ನವೇ ಹೋಗಿ ದರ್ಗಾದಲ್ಲಿ ಅಪ್ಪೆ ರಾಜ ರಾಜೇಶ್ವರಿ ಎಂದು ಕೈಮುಗಿದು ಬರುತ್ತೇನೆ. ನಾನು ಎಲ್ಲ ಸಾನಿಧ್ಯಗಳಿಗೆ ಹೋದರೂ ಪೊಳಲಿ ತಾಯಿಯನ್ನು ಪ್ರಾರ್ಥಿಸುತ್ತೇನೆ ಎನ್ನುತ್ತಾರೆ ದರ್ಗಾ ಸಮೀಪದಲ್ಲೇ ಟೈಲರಿಂಗ್ ವೃತ್ತಿ ಮಾಡುತ್ತಿರುವ ಎಂ.ಎಸ್ ಟೈಲರಿಂಗ್ ಮಾಲೀಕ ಸುಧಾಕರ ಟೈಲರ್.

ಈ ಗ್ರಾಮದಲ್ಲಿ ಇದುವರೆಗೆ ಯಾವುದೇ ರೀತಿಯಲ್ಲಿ ಸಾಮರಸ್ಯಕ್ಕೆ ತೊಂದರೆ ಬಂದಿಲ್ಲ. ಈ ಮಸೀದಿ ಮತ್ತು ದರ್ಗಾವನ್ನು ನಾವು ಚಿಕ್ಕಂದಿನಿಂದಲೇ ನೋಡಿಕೊಂಡು ಬಂದಿದ್ದೇವೆ ಎನ್ನುತ್ತಾರೆ ಸುಧಾಕರ ಟೈಲರ್.

ಮಸೀದಿಯ ಹಳೆ ಕಟ್ಟಡವು ಹಿಂದೂ ಶೈಲಿಯ ಕಟ್ಟದಂತೆ ಕಾಣುತ್ತಿರುವುದರಿಂದ ಕೋಮುವಾದಿ ವ್ಯಕ್ತಿಯೊಬ್ಬ ಇದರ ಫೋಟೊ ತೆಗೆದು ಸುದ್ದಿ ಮಾಡಿರುವುದು ಕಂಡುಬಂದಿದೆ. ಇದೇ ರೀತಿಯ ಮಸೀದಿ ಕಟ್ಟಡಗಳು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಸಾಕಷ್ಟು ಕಂಡುಬರುತ್ತವೆ. ಇದೇ ಮಳಲಿ ಗ್ರಾಮದ ಸಮೀಪದಲ್ಲೇ ಇರುವ ಪೊಳಲಿ ಜುಮಾ ಮಸೀದಿ ಕೂಡ ಇದೇ ರೀತಿಯ ಕಟ್ಟಡ ವಿನ್ಯಾಸ ಹೊಂದಿದೆ. ಮಾತ್ರವಲ್ಲದೆ, ಮಂಗಳೂರು ನಗರದ ಝೀನತ್ ಭಕ್ಷ್ ಯತೀಂ ಖಾನ ಮಸೀದಿ ಕೂಡ ಇದೇ ರೀತಿಯ ಕಟ್ಟಡ ವಿನ್ಯಾಸಗಳನ್ನು ಹೊಂದಿದೆ. ಕಾಸರಗೊಂಡು ಕಾಂಞಗಾಂಡ್ ಸಮೀಪದ ಬೇಕಲ ಮಾಲಿಕ್ ದಿನಾರ್ ದರ್ಗಾ ಹಳೇ ಕಟ್ಟಡ ಕೂಡ ದೇವಸ್ಥಾನದಂತೆ ತೋರುತ್ತದೆ. ಸಿರಿಯಾನ್ ಮಲಬಾರ್ ಕ್ರೈಸ್ತರು ಇತ್ತೀಚೆಗೆ ಮಂಗಳೂರು ಮತ್ತು ನೆಲ್ಯಾಡಿ ಪರಿಸರದಲ್ಲಿ ನಿರ್ಮಾಣ ಮಾಡಿದ ಚರ್ಚುಗಳು ದೇವಸ್ಥಾನಗಳಂತೆ ಇದೆ. ಮಾತ್ರವಲ್ಲದೆ ಚರ್ಚ್ ಎದುರುಗಡೆ ಖಾಯಂ ಧ್ವಜ ಸ್ತಂಭ ಕೂಡ ಇದೆ.

ಫೇಸ್ ಬುಕ್ ನಲ್ಲಿ Inland letter ಎಂಬ ವೆಬ್ ಸೈಟಿನಲ್ಲಿ ಪ್ರಕಟವಾಗಿದ್ದ ವರದಿಯಲ್ಲಿ ಕಾಲೇಜು ಉಪನ್ಯಾಸಕರು ಎಂದು ಹೇಳಲಾದ ಅಭಯ ಕುಮಾರ್ ಎಂಬವರ ಅಭಿಪ್ರಾಯವನ್ನು ಉಲ್ಲೇಖ ಮಾಡಲಾಗಿದ್ದು, ಇದರ ಸತ್ಯಾಸತ್ಯತೆಯನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇದೇ ತಿಂಗಳು ಮಂಗಳೂರಿನ ಝೀನತ್ ಭಕ್ಷ್ ಮಸೀದಿಯು ದೇವಸ್ಥಾನ ಆಗಿರಬಹುದು ಎಂಬ ವಿಡಿಯೊ kartikbalikai4 ಎಂಬ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಟ್ವಿಟ್ಟರಿನಲ್ಲಿ ಹರಿದಾಡಿತ್ತು. ಆದರೆ, ಯಾರೂ ಅತ್ತ ಗಮನ ನೀಡಿರಲಿಲ್ಲ. ಫೇಕ್ ಸುದ್ದಿ ಪ್ರಕಟವಾದ ಬಗ್ಗೆ ಇದುವರೆಗೆ ಯಾವುದೇ ಕಾನೂನು ಕ್ರಮಕೈಗೊಳ್ಳಲಾಗಿಲ್ಲ.

Join Whatsapp
Exit mobile version