ಬೆಂಗಳೂರು: ‘ಕಳೆದ ಮೂರು ವರ್ಷಗಳಲ್ಲಿ ಅದಾನಿ ಅವರ ಸಮೂಹದ ಆಸ್ತಿ 8200 ಕೋಟಿಯಿಂದ 9.94 ಲಕ್ಷ ಕೋಟಿ ಆಗಲು ಕಾರಣ ಏನು? ನೀವು ವಿಶ್ವದ ಅತಿ ಶ್ರೀಮಂತರನ್ನೇ ತೆಗೆದುಕೊಳ್ಳಿ. ಅವರ ಸಂಪತ್ತು 1, 2 ಬಿಲಿಯನ್ ಆಗಲು 20-30 ವರ್ಷ ಶ್ರಮ ಹಾಕಿರುತ್ತಾರೆ. ಆದರೆ ಕೇವಲ 3 ವರ್ಷಗಳಲ್ಲಿ ಒಂದು ಸಮೂಹದ 7 ಕಂಪನಿಗಳು ಹೇಗೆ ಇಷ್ಟು ದೊಡ್ಡ ಸಂಪತ್ತು ಪಡೆಯಿತು. ಒಬ್ಬ ವ್ಯಕ್ತಿಗಾಗಿ ನೀವು ಅಧಿವೇಶನ ಸಮಯ ಹಾಳು ಮಾಡಲು ಸಿದ್ಧರಿದ್ದೀರಾ?. ಆದ್ದರಿಂದ ಅದಾನಿ ಹಗರಣದ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕರೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ಎಲ್’ಐಸಿಯಂತಹ ಸಾರರ್ವಜನಿಕ ಉದ್ದಿಮೆ ಹಣ 36,500 ಕೋಟಿ ಹೂಡಿಕೆ ಮಾಡಿದೆ. 28 ಕೋಟಿ ಭಾರತೀಯರು ಎಲ್’ಐಸಿ ನಲ್ಲಿ ಹೂಡಿಕೆ ಮಾಡಿದ್ದು, ಅದು ಅದಾನಿ ಕಂಪನಿಗೆ ಬಂಡವಾಳ ಹೂಡಿಕೆ ಮಾಡಿದೆ. ಇದು ಕೇಂದ್ರ ಗೃಹ ಸಚಿವರು, ಪ್ರಧಾನಿಗಳ ಅನುಮತಿ ಇಲ್ಲದೆ ಹೂಡಿಕೆ ಅಸಾಧ್ಯ. ಈ ವಿಚಾರದಲ್ಲಿ ಬಿಜೆಪಿಯವರು ಚರ್ಚೆಗೆ ಬರಲು ಸಿದ್ಧರಿಲ್ಲ ಎಂದರು.
ಇನ್ನು 80 ಸಾವಿರ ಕೋಟಿ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸಾಲ ಪಡೆದಿದ್ದು, ಇದರಲ್ಲಿ ಸಾರ್ವಜನಿಕರ ಹಣ ಸೇರಿದೆ. ಇದು ಸಾರ್ವಜನಿಕ ಚರ್ಚೆ ಆಗಬೇಕಲ್ಲವೇ? ಕಳೆದ ಮೂರು ದಿನಗಳಿಂದ ಸದನದಲ್ಲಿ ಈ ವಿಚಾರ ಚರ್ಚೆ ಮಾಡಲು ಸಿದ್ಧರಿಲ್ಲ. ಇವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಬಂಡವಾಳಶಾಹಿಗಳಿಗೆ ನರವು ನೀಡುವುದು ಮಾತ್ರವವಲ್ಲ ಅವರನ್ನು ರಕ್ಷಣೆ ಮಾಡಲು ಸಂಸತ್ತನ್ನು ಬಳಸಿಕೊಳ್ಳುತ್ತಿದ್ದಾರೆ. ಮಾತೆತ್ತಿದರೆ ದೇಶಭಕ್ತಿ ಬಗ್ಗೆ ಮಾತನಾಡುವ ಬಿಜೆಪಿ ಅವರಿಗೆ ನಿಜವಾದ ದೇಶಭಕ್ತಿ ಇದ್ದರೆ, ಅದಾನಿ ಕಂಪನಿಯಲ್ಲಿ ಹೂಡಿಕೆಯಾಗಿರುವ ದೇಶದ 28 ಕೋಟಿ ಜನರ ಹಣ ಹೇಗೆ ರಕ್ಷಣೆ ಮಾಡುತ್ತೀರಿ? ಎಂದು ಶ್ವೇತಪತ್ರ ಹೊರಡಿಸಿ. ಅದಾನಿ ಸಮೂಹ ರಕ್ಷಿಸಲು ಪ್ರಧಾನಿ ಅವರು ಮುಂದಾಗಿರುವುದು ದೇಶದ ಇತಿಹಾಸದಲ್ಲೇ ಮೋದಲು. ಪ್ರಧಾನಮಂತ್ರಿಗಳು ಹಾಗೂ ಅದಾನಿ ಅವರ ಬೆಳವಣಿಗೆ ಏಕಕಾಲದಲ್ಲಿ ಆಗಿದೆ. ಒಬ್ಬ ವ್ಯಕ್ತಿಗಾಗಿ ದೇಶದ ದಿಕ್ಕು ತಪ್ಪಿಸುವುದು ತಪ್ಪು. ಈ ವಿಚಾರದಲ್ಲಿ ಪರಿಣಾಮಕಾರಿ ತನಿಖೆ ಆಗಬೇಕು. ಸರ್ಕಾರ ಹಾಗೂ ಉದ್ಯಮಿಗಳ ತನಿಖೆ ಮಾಡುವ ಅಧಿಕಾರವನ್ನು ನೀಡಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಮಾಜಿ ಸಚಿವ ಪ್ರೊ.ಬಿ.ಕೆ ಚಂದ್ರಶೇಖರ್ ಮಾತನಾಡಿ, ‘ಹಿಂಡನ್ ಬರ್ಗ್ ಕುರಿತು ಸಾಕಷ್ಟು ಪ್ರಶ್ನೆ ಹುಟ್ಟುಕೊಂಡಿವೆ. ಇವರ 2008ರಲ್ಲಿ ಆರಂಭವಾಗಿದ್ದು, ಇವರು ಷೇರುಪೇಟೆ ಹಾಗೂ ಕಂಪನಿಗಳಲ್ಲಿ ಅಕ್ರಮದ ಬಗ್ಗೆ ತನಿಖೆ ಮಾಡಿ ವರದಿ ನೀಡುತ್ತಾರೆ. ಈ ಸಂಸ್ಥೆ ಅದಾನಿ ಅವರ ಕಂಪನಿಗೂ ಮುನ್ನ ಒಂದೆರಡು ಕಂಪನಿ ಬಗ್ಗೆ ತನಿಖೆ ಮಾಡಿದೆ. ನಿಕಾಲ್ ಎಂಬ ಕಂಪನಿ ಬಗ್ಗೆ ವರದಿ ಪ್ರಕಟಿಸಿತ್ತು. ಈ ಕಂಪನಿ ಎಲೆಕ್ಟ್ರಿಕ್ ವಾಹನ ನಿರ್ಮಾಣ ಮಾಡುತ್ತೇವೆ. ಕೇವಲ ಸಣ್ಣ ವಾಹನ ಮಾತ್ರವಲ್ಲ ದೊಡ್ಡ ವಾಹನ ತಯಾರಿಸುತ್ತೇವೆ ಎಂದು ಹೇಳಿತ್ತು. ಹೀಗಾಗಿ ಹಿಡನ್ ಬರ್ಗ್ ತನಿಖೆ ಮಾಡಿದೆ. ನಂತರ ಈ ಕಂಪನಿಯವರು ತಪ್ಪಿತಸ್ಥರೆಂದು ತೀರ್ಮಾನವಾಗಿದ್ದು, ಜೈಲಿಗೆ ಹೋಗಿದ್ದರು ಎಂದು ಹೇಳಿದರು.
ಕೇಂದ್ರ ಸರ್ಕಾರ ಬಿಬಿಸಿ ಸಾಕ್ಷ್ಯಚಿತ್ರ ವಿಚಾರವಾಗಿ ದೇಶದ ಮೇಲೆ, ಪ್ರಧಾನಿ ಮೇಲಿನ ದಾಳಿ ಎಂದು ಆರೋಪಿಸಿದರು. ಇದೊಂದು ಬೇಜವಾಬ್ದಾರಿ ಹೇಳಿಕೆ. ಈ ಹಿಂದೆ ಇಂದಿರಾ ಇಸ್ ಇಂಡಿಯಾ ಎಂಬ ವರದಿ ಬಂದಿತ್ತು. ಅದನ್ನು ನಾನು ಖಂಡಿಸಿದ್ದೆ. ಈಗ ಇವರು ಮೋದಿ ಇಸ್ ಇಂಡಿಯಾ ಎಂದು ಹೇಳುತ್ತಿದ್ದಾರೆ. ಈಗ ಅಧಾನಿ ಇಸ್ ಇಂಡಿಯಾ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.