ಜೆರುಸಲೇಂ: ಜೆರುಸಲೇಂನ ಪವಿತ್ರ ಸ್ಥಳವಾದ ಅಲ್-ಅಕ್ಸಾ ಮಸೀದಿಯನ್ನು ಗುರಿಪಡಿಸಿ ಇಸ್ರೇಲ್ ಪಡೆಗಳು ಇಂದು ಮುಂಜಾನೆ ದಾಳಿ ನಡೆಸಿದ್ದು ಕನಿಷ್ಠ 20 ಮಂದಿ ಫೆಲೆಸ್ತೀನಿಯನ್ನರು ಗಾಯಗೊಂಡಿದ್ದಾರೆ.
ಪವಿತ್ರ ರಮಝಾನ್ ನ ಪ್ರಾರ್ಥನೆಯಲ್ಲಿ ತೊಡಗಿದ್ದ ಫೆಲೆಸ್ತೀನಿಯನ್ನರನ್ನು ಗುರಿಪಡಿಸಿ ಇಸ್ರೇಲಿ ಪೊಲೀಸರು ಹಠಾತ್ತಾಗಿ ಗ್ರೆನೇಡ್ ದಾಳಿ ನಡೆಸಿದ್ದಾರೆ ಎಂದು ಅಲ್ ಅಕ್ಸಾ ಇಸ್ಲಾಮಿಕ್ ದತ್ತಿ ಸಂಸ್ಥೆ ತಿಳಿಸಿದೆ. ಇದೇ ವೇಳೆ ಪೊಲೀಸರು ಅಶ್ರುವಾಯು ಸಿಡಿಸುವ ವೀಡಿಯೋಗಳು ವೈರಲ್ ಆಗಿದೆ.
ಇಸ್ರೇಲ್ ದಾಳಿಯಲ್ಲಿ ಗಾಯಗೊಂಡ 20 ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಿರುವುದಾಗಿ ಫೆಲೆಸ್ತೀನ್ ರೆಡ್ ಕ್ರೆಸೆಂಟ್ ತುರ್ತು ಸೇವೆ ತಿಳಿಸಿದ್ದು, ಸ್ಥಳದಲ್ಲಿದ್ದ ಕಾವಲುಗಾರರೊಬ್ಬರಿಗೆ ರಬ್ಬರ್ ಬುಲೆಟ್ ನಿಂದ ಕಣ್ಣಿಗೆ ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ.