ಬೈರೂತ್: ಇಸ್ರೇಲ್ ಜೊತೆಗಿನ ಸಂಘರ್ಷವು ಹೊಸ ಹಂತವನ್ನು ತಲುಪಿದೆ. ಇಸ್ಮಾಯೀಲ್ ಹಾನಿಯೆಹ್ ಹಾಗೂ ಫಅದ್ ಶುಕ್ರ್ ಅವರ ಹತ್ಯೆಗೆ ಇಸ್ರೇಲಿಗರು ಸಂಭ್ರಮಿಸುತ್ತಿದ್ದಾರೆ. ಆದರೆ ಅವರು ಅಳುವುದು ಬಹಳಷ್ಟಿದೆ ಎಂದು ಹಿಜ್ಬುಲ್ಲಾ ಉಚ್ಚ ನಾಯಕ ಹಸನ್ ನಸ್ರಲ್ಲಾ ಹೇಳಿದ್ದಾರೆ.
ಜುಲೈ 30ರಂದು ಇಸ್ರೇಲ್ ಬೈರೂತ್ ಮೇಲೆ ನಡೆಸಿದ ರಾಕೆಟ್ ದಾಳಿಯಲ್ಲಿ ಸಾವನ್ನಪ್ಪಿದ ಹಿಝ್ಬುಲ್ಲಾ ಗುಪಿನ ಕಮಾಂಡರ್ ಫವಾದ್ ಶುಕ್ರ್ ಅಂತ್ಯಕ್ರಿಯೆ ಬೈರೂತ್‌ನ ದಕ್ಷಿಣ ಉಪನಗರದಲ್ಲಿ ನಡೆದಿದ್ದು, ಅದರಲ್ಲಿ ಭಾಗವಹಿಸಿದ್ದ ಬೃಹತ್ ಜನಸ್ತೋಮವನ್ನುದ್ದೇಶಿಸಿ ಅವರು ಹೀಗೆ ಹೇಳಿದ್ದಾರೆ.
ಇಸ್ರೇಲ್ ವಿರುದ್ಧ ಅತ್ಯಂತ ಚೆನ್ನಾಗಿ ಲೆಕ್ಕಾಚಾರ ಮಾಡಿಯೇ ಪ್ರತೀಕಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಫಅದ್ ಶುಕ್ರ್ ಅಂತ್ಯಕ್ರಿಯೆ ಸಮಾರಂಭದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದು, ಹಿಜ್ಬುಲ್ಲಾ ಧ್ವಜಗಳನ್ನು ಹಾಗೂ ಶುಕ್ರ್ ಅವರ ಭಾವಚಿತ್ರಗಳನ್ನು ಹಿಡಿದಿದ್ದರು. ಹಿಝ್ಬುಲ್ಲಾ ಧ್ವಜವನ್ನು ಹೊದಿಸಲ್ಪಟ್ಟಿದ್ದ ಶುಕ್ರ್ ಪಾರ್ಥಿವ ಶರೀರದ ಶವಪೆಟ್ಟಿಗೆಯನ್ನು ಹೊತ್ತು ಹಿಝ್ಬುಲ್ಲಾ ಹೋರಾಟಗಾರರು ಮೆರವಣಿ ನಡೆಸಿದ್ದಾರೆ.
ಇರಾನ್ ರಾಜಧಾನಿ ಟೆಹರಾನ್‌ನ ವಸತಿಕಟ್ಟಡವೊಂದರಲ್ಲಿ ಬುಧವಾರ ನಸುಕಿನ ವೇಳೆ ನಡೆದ ದಾಳಿಯಲ್ಲಿ ಹಾನಿಯೆಹ್ ಹಾಗೂ ಅವರ ಅಂಗರಕ್ಷಕ ಸಾವನ್ನಪ್ಪಿದ್ದರು. ಇರಾನ್‌ನ ನೂತನ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಟೆಹರಾನ್‌ಗೆ ಆಗಮಿಸಿದ್ದಾಗ ಈ ದಾಳಿ ನಡೆದಿತ್ತು.