ಅಬುಧಾಬಿ: ಆರೋಗ್ಯ ಕ್ಷೇತ್ರದಲ್ಲಿ ಯುಎಇ ಮತ್ತು ಇಸ್ರೇಲ್ ನಡುವೆ ಸಹಕಾರವನ್ನು ಬಲಪಡಿಸಲು ಮತ್ತು ಉಭಯ ರಾಷ್ಟ್ರಗಳ ಕಾರ್ಯ ಚಟುವಟಿಕೆಗಳನ್ನು ಉತ್ತೇಜಿಸಲು ಅಬುಧಾಬಿ ಆರೋಗ್ಯ ಸಚಿವಾಲಯವು ಇಸ್ರೇಲ್ ನ ಅತಿದೊಡ್ಡ ಆರೋಗ್ಯ ಸೇವೆ ಒದಗಿಸುವ ಸಂಸ್ಥೆ ಕ್ಲಾಲಿಟ್ ಹೆಲ್ತ್ ಸರ್ವೀಸಸ್ ಜೊತೆ ಒಪ್ಪಂದ ಮಾಡಿಕೊಂಡಿದೆ.
ಅಬುಧಾಬಿ ಆರೋಗ್ಯ ಇಲಾಖೆ ಅಧೀನ ಕಾರ್ಯದರ್ಶಿ ಡಾ. ಜಮಾಲ್ ಮೊಹಮ್ಮದ್ ಅಲ್ ಕಾಬಿ ಮತ್ತು ಕ್ಲಾಲಿಟ್ ಹೆಲ್ತ್ ಸರ್ವೀಸಸ್ ಕಾರ್ಯನಿರ್ವಾಹಕ ನಿರ್ದೇಶಕ ಓಹಾದ್ ಡೋಡ್ಸನ್ ಒಪ್ಪಂದ ಪತ್ರಕ್ಕೆ ಸಹಿ ಮಾಡಿದ್ದಾರೆ.
ಡಿಜಿಟಲ್ ಹೆಲ್ತ್, ವಿಸಿಟಿಂಗ್ ಫಿಸಿಷ್ಯನ್ ಪ್ರೋಗ್ರಾಂ, ವೈದ್ಯಕೀಯ ಶಿಕ್ಷಣ, ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರೋಗಿಗಳ ಉಲ್ಲೇಖಗಳು, ಸಂಶೋಧನೆ ಮತ್ತು ವೈದ್ಯಕೀಯ ಸೇವೆ ಬಗ್ಗೆ ಸಹಕರಿಸುವ ನಿರ್ಧಾರವನ್ನು ಒಪ್ಪಂದ ಪತ್ರವು ಸ್ಪಷ್ಟಪಡಿಸುತ್ತದೆ.
ಅಬುಧಾಬಿ ಆರೋಗ್ಯ ಇಲಾಖೆಯ ಚೇರ್ಮೆನ್ ಶೇಖ್ ಅಬ್ದುಲ್ಲಾ ಬಿನ್ ಮೊಹಮ್ಮದ್ ಅಲ್ ಹಮೀದ್, ಯುಎಇಯ ಇಸ್ರೇಲ್ ರಾಯಭಾರಿ ಎಥಾನ್ ನಹೆ ಮತ್ತು ನ್ಯಾಷನಲ್ ಹೆಲ್ತ್ ಇನ್ಶೂರೆನ್ಸ್ ಕಂಪನಿ ದಮನ್ ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಹಮದ್ ಅಬ್ದುಲ್ಲಾ ಅಲ್ ಮಹಿಯಾಸ್ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.