ಗಾಝಾ: ಜೆರುಸಲೆಮ್ ನ ವಿವಿಧ ಭಾಗಗಳಲ್ಲಿ 17 ಸಾವಿರಕ್ಕಿಂತಲೂ ಅಧಿಕ ವಸಾಹತು ಕಾಲನಿಗಳನ್ನು ನಿರ್ಮಿಸಲು ಇಸ್ರೇಲ್ ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ ಎಂದು ಫೆಲೆಸ್ತೀನ್ ಅಧಿಕಾರಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಜೆರುಸಲೆಮ್ ವ್ಯವಹಾರಗಳ ಸಚಿವ ಫಾದಿ ಅಲ್ – ಹದ್ಮಿ ಇಸ್ರೇಲ್ ಯೋಜನೆಯನ್ನು ಹುಚ್ಚುತನದ ಪರಮಾವಧಿ ಎಂದು ಬಣ್ಣಿಸಿದ್ದಾರೆ.
ಪ್ರಸಕ್ತ ಇಸ್ರೇಲ್ ಹಮ್ಮಿಕೊಂಡಿರುವ ಯೋಜನೆಯು ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಕ್ಕೆ ಮತ್ತಷ್ಟು ಹಾನಿಯಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.
ಇಸ್ರೇಲ್ ಸರ್ಕಾರ ಜೆರುಸಲೆಮ್ ನಗರದ ಉತ್ತರ, ದಕ್ಷಿಣ ಮತ್ತು ಪೂರ್ವದಲ್ಲಿ ಪ್ರಮುಖ ವಸಾಹತು ಯೋಜನೆಗಳನ್ನು ಅನುಷ್ಠಾನಗೊಳಿಸುವತ್ತ ಮುನ್ನಡೆಯುತ್ತಿದೆ. ಪಶ್ಚಿಮ ದಂಡೆಯಲ್ಲಿ ಫೆಲೆಸ್ತೀನ್ ಸುತ್ತಮುತ್ತಲಿನಲ್ಲಿ ಸಂಪೂರ್ಣವಾಗಿ ಪ್ರತ್ಯೇಕಿಸುವ ಗುರಿಯನ್ನು ಹೊಂದಿದೆ ಎಂದು ಫಾದಿ ಅಲ್ – ಹದ್ಮಿ ಆರೋಪಿಸಿದ್ದಾರೆ.
ಮಾತ್ರವಲ್ಲ ಉತ್ತರ ಭಾಗದಲ್ಲಿರುವ ಕ್ವಾಲಾಂಡಿಯಲ್ಲಿರುವ ಜೆರುಸಲೆಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭೂಮಿಯಲ್ಲಿ 10 ಸಾವಿರ ವಸಾಹತು ಕಾಲನಿಗಳನ್ನು ನಿರ್ಮಿಸುವ ಯೋಜನೆಯನ್ನು ಒಳಗೊಂಡಿದೆ ಎಂದು ಫೆಲೆಸ್ತೀನ್ ಸಚಿವರು ಹೇಳಿದರು.
ಇಸ್ರೇಲ್ ಅಧಿಕಾರಿಗಳು ಪೂರ್ವ ಜೆರುಸಲೆಮ್ ನಲ್ಲಿ 3500 ವಸತಿ ಕಾಲನಿ ನಿರ್ಮಿಸಲು ಯೋಜನೆ ಹಾಕಿದ್ದಾರೆ. ಗಿವಾಟ್ ಹಮಾಟೋಸ್ ವಸಾಹತು ಪ್ರದೇಶದಲ್ಲಿ 1250 ನಿವಾಸ, ಫ್ರೆಂಚ್ ಹಿಲ್ ವಸಾಹತುಗಳಲ್ಲಿ 2000 ಮತ್ತು ಪಿಸ್ ಗಾಟ್ ಝೀವ್ ವಸಾಹತುನಲ್ಲಿ 470 ನಿವಾಸ ನಿರ್ಮಿಸಲಿದ್ದಾರೆ ಎಂದು ಅವರು ತಿಳಿಸಿದರು.