ನವದೆಹಲಿ: ಮಧ್ಯಪ್ರಾಚ್ಯ ಪ್ರದೇಶದಲ್ಲಿ ಯುದ್ಧಭೀತಿ ವಾತಾವರಣ ಇನ್ನಷ್ಟು ಬಿಗಡಾಯಿಸಿದೆ. ಇಸ್ರೇಲ್ ಮೇಲೆ ಇರಾನ್ 400ಕ್ಕೂ ಹೆಚ್ಚು ಕ್ಷಿಪಣಿಗಳಿಂದ ದಾಳಿ ಮಾಡಿದೆ.
ಇರಾನ್ ಮೇಲೆ ಸದ್ಯದಲ್ಲೇ ತಕ್ಕ ರೀತಿಯಲ್ಲಿ ದಾಳಿ ಮಾಡುವುದಾಗಿ ಇಸ್ರೆಲ್ ಎಚ್ಚರಿಕೆ ನೀಡಿದೆ. ಇಸ್ರೇಲ್ ದಾಳಿ ಮಾಡಿದಲ್ಲಿ ಹಿಂದಿಗಿಂತಲೂ ಹೆಚ್ಚು ತೀವ್ರವಾಗಿ ದಾಳಿ ಮಾಡುವುದಾಗಿ ಇರಾನ್ ಕೂಡ ಎಚ್ಚರಿಕೆ ನೀಡಿದೆ.
ಈ ಮಧ್ಯೆ ತೈಲ ಸಂಪದ್ಭರಿತ ಮಧ್ಯಪ್ರಾಚ್ಯ ಪ್ರದೇಶ ಹೊತ್ತಿ ಉರಿಯುವುದೋ ಎನ್ನುವ ಆತಂಕ ಇದೆ.
ಭಾರತ ಮತ್ತು ಇಸ್ರೇಲ್ ಮಧ್ಯೆ ವಿವಿಧ ಸ್ತರಗಳಲ್ಲಿ ಗೆಳೆತನ ಇದೆ. ಮಧ್ಯಪ್ರಾಚ್ಯ ದೇಶಗಳ ಜೊತೆಗೂ ಭಾರತಕ್ಕೆ ಉತ್ತಮ ಸಂಬಂಧ ಇದೆ. ಹೀಗಾಗಿ, ಈ ಯುದ್ಧದಲ್ಲಿ ಭಾರತ ಯಾವುದೇ ದೇಶದ ಪರವಾಗಿ ಅಧಿಕೃತವಾಗಿ ನಿಲುವು ತೆಗೆದುಕೊಳ್ಳುತ್ತಿಲ್ಲ.
ಮಧ್ಯಪ್ರಾಚ್ಯ, ಗಲ್ಫ್ ಮತ್ತು ಪಶ್ಚಿಮ ಏಷ್ಯನ್ ಪ್ರದೇಶಗಳಲ್ಲಿ ಭಾರತಕ್ಕೆ ವ್ಯಾವಹಾರಿಕ ಸಂಬಂಧ ಗಾಢವಾಗಿದೆ. ಇಸ್ರೇಲ್ ಇರಾನ್ ಯುದ್ಧ ಪೂರ್ಣಮಟ್ಟಕ್ಕೆ ಹೋದರೆ ತೈಲ ಪೂರೈಕೆ ಮೇಲೆ ಪರಿಣಾಮ ಬೀರಬಹುದು. ಭಾರತಕ್ಕೆ ಹೆಚ್ಚಿನ ತೈಲ ಹರಿದುಬರುವುದು ಇವೇ ಪಶ್ಚಿಮ ಏಷ್ಯನ್ ದೇಶಗಳಿಂದ. ರಷ್ಯಾದಿಂದ ಸೀಮಿತ ಪ್ರಮಾಣದಲ್ಲಿ ಮಾತ್ರವೇ ತೈಲ ಸಿಗುವ ನಿರೀಕ್ಷೆ ಇರುತ್ತದೆ. ಹೀಗಾಗಿ, ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಭಾರತದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಆಗಬಹುದು. ಇದು ತೀರಾ ದೊಡ್ಡ ಬಿಕ್ಕಟ್ಟಾದರೆ ಬೆಲೆ ಏರಿಕೆಯ ಗಾಯಕ್ಕೆ ಮತ್ತಷ್ಟು ಬರೆ ಬಿದ್ದಂತಾಗುತ್ತದೆ.
ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಭಾರತೀಯರು…
ಮಧ್ಯಪ್ರಾಚ್ಯ ಬಿಕ್ಕಟ್ಟು ಉಲ್ಭಣಿಸಿದರೆ ಗಲ್ಫ್ ದೇಶಗಳು ಸ್ತಬ್ಧಗೊಳ್ಳಬಹುದು. ಇಲ್ಲಿ ಹತ್ತಿರ ಹತ್ತಿರ ಒಂದು ಕೋಟಿಯಷ್ಟು ಭಾರತೀಯರು ವಿವಿಧೆಡೆ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಗಳಿಸಿದ ಸಂಪಾದನೆಯ ಕೆಲ ಭಾಗವನ್ನು ಭಾರತದಲ್ಲಿರುವ ತಮ್ಮ ಮನೆಮಂದಿಗೆ ಕಳುಹಿಸುತ್ತಾರೆ. ಇದರಿಂದ ಭಾರತದ ಆರ್ಥಿಕತೆಗೆ ಒಂದಷ್ಟು ಕೊಡುಗೆ ಸಿಗುತ್ತಿದೆ. ಯುದ್ಧವಾಗಿ ಗಲ್ಫ್ ದೇಶಗಳು ಸ್ತಬ್ದಗೊಂಡರೆ ಈ ಭಾರತೀಯರ ಸಂಪಾದನೆ ತಾತ್ಕಾಲಿಕವಾಗಿ ನಿಂತು ಹೋಗಬಹುದು.
ಗಲ್ಫ್ ದೇಶಗಳೊಂದಿಗೆ ಭಾರತಕ್ಕೆ ಉತ್ತಮ ವ್ಯಾವಹಾರಿಕ ಸಂಬಂಧ ಇದೆ. ಈ ಪಶ್ಚಿಮ ಏಷ್ಯನ್ ದೇಶಗಳಿಂದ ತೈಲ, ನೈಸರ್ಗಿಕ ಅನಿಲ ಮತ್ತು ರಸಗೊಬ್ಬರಗಳು ಭಾರತಕ್ಕೆ ರಫ್ತಾಗುತ್ತವೆ. ಭಾರತವು ಯಂತ್ರೋಪಕರಣಗಳಿಂದ ಹಿಡಿದು ಔಷಧವರೆಗೆ ನಾನಾ ಉತ್ಪನ್ನಗಳನ್ನು ಈ ದೇಶಗಳಿಗೆ ರಫ್ತು ಮಾಡುತ್ತದೆ. ಬಹಳ ಕಡೆ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಭಾರತೀಯ ಕಂಪನಿಗಳು ನಡೆಸುತ್ತಿವೆ. ಈ ದೇಶಗಳೊಂದಿಗೆ ಭಾರತ ಹೊಂದಿರುವ ಒಟ್ಟಾರೆ ವ್ಯವಹಾರ 195 ಬಿಲಿಯನ್ ಡಾಲರ್. ಅಂದರೆ, ಸುಮಾರು 15,000 ಕೋಟಿ ರೂಗೂ ಹೆಚ್ಚು ಮೊತ್ತದ ಟ್ರೇಡಿಂಗ್ ಸಂಬಂಧ ಇದೆ.