ಗಾಝಾ ಸಿಟಿ : ಗಾಝಾ ನಗರದ ಅಲ್-ಅಹ್ಲಿ ಆಸ್ಪತ್ರೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ಮಾಡಿದೆ, 500ಕ್ಕಿಂತಲೂ ಹೆಚ್ಚು ಸಾವು ಸಂಭವಿಸಿದೆ. ನಾಗರಿಕರ ಮೇಲೆ ಇಸ್ರೇಲ್ ಭೀಕರ ಹತ್ಯಾಕಾಂಡವನ್ನೇ ನಡೆಸಿದೆ.
ಯುದ್ಧ ಸಂತ್ರಸ್ತ ಗಾಯಾಳುಗಳು ಮತ್ತು ಇತರ ಪ್ಯಾಲೆಸ್ಟೀನಿಯಾದವರಿಂದಲೇ ತುಂಬಿದ ಗಾಜಾ ನಗರದ ಆಸ್ಪತ್ರೆಯಲ್ಲಿ ಮಂಗಳವಾರ ಭಾರಿ ಸ್ಫೋಟ ಸಂಭವಿಸಿದ್ದು, 500ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಆಸ್ಪತ್ರೆಯಲ್ಲಿ ಸಾವಿರಾರು ನಾಗರಿಕರು ಚಿಕಿತ್ಸೆ ಪಡೆಯುತ್ತಿದ್ದರು. ನಿರಂತರ ದಾಳಿಯ ನಿರಾಶ್ರಿತರೂ ಆಸ್ಪತ್ರೆಯಲ್ಲಿ ಆಶ್ರಯ ಪಡೆಯುತ್ತಿದ್ದರು ಎನ್ನಲಾಗಿದೆ. ಬಾಂಬ್ ದಾಳಿಯಿಂದಾಗಿ ಕನಿಷ್ಠ 500 ಮಂದಿ ಸಾವನ್ನಪ್ಪಿದ್ದಾರೆ ಎಂದು ಗಾಝಾ ಆರೋಗ್ಯ ಸಚಿವಾಲಯ ಹೇಳಿದೆ ಎಂದು ಮಾಧ್ಯಮಗಳು ಹೇಳಿವೆ. ವಿಶ್ವ ಸಂಸ್ಥೆ ನಡೆಸುತ್ತಿದ್ದ ಶಾಲೆಯಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತರ ಮೇಲೂ ದಾಳಿ ನಡೆಸಲಾಗಿದೆ ಎಂದೂ ಮಾಹಿತಿ ಇದೆ.
ಅಲ್-ಅಹ್ಲಿ ಅರಬ್ ಆಸ್ಪತ್ರೆಯ ಮೇಲಿನ ಭೀಕರ ದಾಳಿಯು ಅಂತರರಾಷ್ಟ್ರೀಯ ಖಂಡನೆಗೆ ಕಾರಣವಾಗಿದೆ. ಇದು ಅತಿರೇಕದ ಮತ್ತು ಮತ್ತೊಮ್ಮೆ ಇದು ನಾಗರಿಕರ ಜೀವನದ ಬಗ್ಗೆ ಸ್ಪಷ್ಟವಾದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ ಇನ್ ನಿಯರ್ ಈಸ್ಟ್ (UNRWA) ಹೇಳಿಕೊಂಡಿದೆ.