ಗಾಝಾ: ಕದನ ವಿರಾಮ ಘೋಷಿಸುವಂತೆ ಅಂತಾರಾಷ್ಟ್ರೀಯ ಸಮುದಾಯ, ವಿಶ್ವಸಂಸ್ಥೆ ಒತ್ತಡ ಹಾಕುತ್ತಿದ್ದರೂ ಕಿಂಚಿತ್ತೂ ಬೆಲೆ ಕೊಡದ ಇಸ್ರೇಲ್ ಗಾಝಾದಲ್ಲಿ ದಾಳಿಯನ್ನು ತೀವ್ರಗೊಳಿಸಿದೆ. ಗಾಝಾದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಇಸ್ರೇಲ್ ತೀವ್ರ ದಾಳಿ ನಡೆಸಿದ್ದು, 41 ನಾಗರಿಕರು ಮೃತಪಟ್ಟಿದ್ದಾರೆ.
ಉತ್ತರ ಗಾಝಾದ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 13 ಮಂದಿ ಮೃತಪಟ್ಟು 75 ಮಂದಿ ಗಾಯಗೊಂಡಿದ್ದಾರೆ.
ಗಾಝಾದಲ್ಲಿರುವ ಎಂಟು ನಿರಾಶ್ರಿತರ ಶಿಬಿರಗಳಲ್ಲಿ ಜಬಾಲಿಯಾ ಶಿಬಿರವೇ ದೊಡ್ಡದು. 1.4 ಚದರ ಕಿ.ಮೀ ವಿಸ್ತೀರ್ಣದಲ್ಲಿರುವ ಈ ಶಿಬಿರವು 1.16 ಲಕ್ಷ ನೋಂದಾಯಿತ ನಿರಾಶ್ರಿತರಿಗೆ ನೆಲೆ ಒದಗಿಸಿದೆ. ಇಲ್ಲಿರುವ ಹಲವರು ಆಹಾರ, ಔಷಧ ಸೇರಿದಂತೆ ಇನ್ನಿತರೆ ಅವಶ್ಯಕ ವಸ್ತುಗಳಿಗಾಗಿ ಪ್ಯಾಲೆಸ್ಟೀನಿಯನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯಗಳ ಸಂಸ್ಥೆ ನೀಡುವ ಸಹಾಯವನ್ನೇ ಅವಲಂಬಿಸಿದ್ದಾರೆ.
ದಕ್ಷಿಣ ಗಾಝಾದಲ್ಲಿ ನಡೆದ ದಾಳಿಯಲ್ಲಿ 28 ಜನರು ಮೃತಪಟ್ಟಿದ್ದಾರೆ. ಉತ್ತರ ಗಾಝಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಕೈಕ ಆಸ್ಪತ್ರೆಯ ಮೇಲೂ ಇಸ್ರೇಲ್ ಸೇನೆ ದಾಳಿ ನಡೆಸಿದೆ. ಇಲ್ಲಿನ ಪ್ರಮುಖ ನಗರಗಳು ಬಹುತೇಕ ನಾಶವಾಗಿವೆ ಎಂದೂ ವರದಿಯಾಗಿದೆ.