ಬಿಎಡ್ ಮೂರನೇ ಸೆಮಿಸ್ಟರ್ ಪಠ್ಯದಲ್ಲಿ ಇಸ್ಲಾಂ ವಿರೋಧಿ ಅಂಶಗಳು: ವ್ಯಾಪಕ ಆಕ್ರೋಶ

Prasthutha|

ಬೆಂಗಳೂರು: ಬಿಎಡ್ ಮೂರನೇ ಸೆಮಿಸ್ಟರ್ ಪಠ್ಯಪುಸ್ತಕದಲ್ಲಿ ಇಸ್ಲಾಮ್ ಮತ್ತು ಮುಸ್ಲಿಮರ ವಿರುದ್ಧ ದ್ವೇಷಭಾವನೆ ಮೂಡಿಸುವಂತಹ ಅಂಶಗಳನ್ನು ಸೇರಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

- Advertisement -

ಬಿ.ಆರ್. ರಾಮಚಂದ್ರಯ್ಯ ಅವರು ಬರೆದು, ವಿಸ್ಮಯ ಪ್ರಕಾಶನ ಹೊರತಂದ “ಮೌಲ್ಯ ದರ್ಶನ ದಿ ಎಸ್ಸೆನ್ಸ್ ಆಫ್ ವ್ಯಾಲ್ಯೂ ಎಜುಕೇಷನ್” ಎಂಬ ಕೃತಿಯಲ್ಲಿ ಇಸ್ಲಾಮ್ ಮತ್ತು ಮುಸ್ಲಿಮರನ್ನು ಅವಹೇಳನಕಾರಿಯಾಗಿ ಚಿತ್ರಿಸಿದ್ದು, ಈ ಕೃತಿಯನ್ನು ಎಲ್ಲಾ ವಿಶ್ವವಿದ್ಯಾಲಯಗಳು ಬಿಎಡ್ ಮೂರನೇ ಸೆಮಿಸ್ಟರ್ ಗೆ ಪಠ್ಯಪುಸ್ತಕವಾಗಿ ಆಯ್ಕೆ ಮಾಡಿಕೊಂಡಿದೆ.


ಸಂಕುಚಿತತೆ ಎಂಬ ವಿಷಯವನ್ನು ವಿವರಿಸುವಾಗ ಇಸ್ಲಾಮ್ ಧರ್ಮವನ್ನು ಈ ಕೆಳಗಿನಂತೆ ಹೀಯಾಳಿಸಲಾಗಿದೆ:

- Advertisement -

“ ಜನಸಾಮಾನ್ಯರಿಗೆ ಬೇಕಾದುದು ಕರುಣೆ, ಶಾಂತಿ ಮತ್ತು ಸೌಹಾರ್ದ. ಜಿಹಾದ್ ಮತ್ತು ದಾರುಲ್ ಇಸ್ಲಾಂ ಇದನ್ನು ಇಸ್ಲಾಂ ಬಯಸುತ್ತದೆ. ಸೌಹಾರ್ದ, ಶಾಂತಿ, ಮತ್ತು ಸಹಬಾಳ್ವೆ ಈ ದಾರಿಯಲ್ಲಿ ಭಿನ್ನ ಮೌಲ್ಯವನ್ನು ನಾವು ಹೊಂದಿದ್ದೇವೆ; ಮಾನವೀಯ ಹೋಲಿಕೆ ನಮ್ಮದು. ಎಲ್ಲ ಮಾನವರಲ್ಲೂ ಭಿನ್ನತೆ ಇರುವಂತೆಯೇ ಕೆಲವು ಮೌಲ್ಯಯುತ ಮೌಲ್ಯಗಳು ಇರುತ್ತವೆ. ಬುದ್ಧಿವಂತನೊಬ್ಬ ಹೇಳಿದಂತೆ ‘ಪ್ರತಿಯೊಂದೂ ಏನಾಗಿದೆಯೋ ಅದು, ಅದು ಅಲ್ಲ ಇನ್ನೊಂದೂ ಅಲ್ಲ’ “ಎಸೊನೊ ಎಸೊನೊ ನಾ ಎಸೊನೊ ಸೋ ಸೊನೊ” ಎಂದರೆ ಆನೆಯು ಒಂದು, ಹುಳು ಬೇರೆಯೇ ಒಂದು ಎಂಬ ನೀತಿಯನ್ನು ಮರೆಯುವಂತಿಲ್ಲ.

ನಾವು ಬಹು ಮೌಲ್ಯಗಳನ್ನು ಹೊಂದಿದ್ದೇವೆ. ಅದು ವಸ್ತುನಿಷ್ಠವಾಗಿದ್ದು ಮಾನವೀಯತೆಯ ಸತ್ವವಾಗಿದೆ. ಆದರೆ ಮುಸ್ಲಿಮರಿಗೆ ಕುರ್ ಆನ್ ಸರ್ವಸ್ವವಾಗಿದ್ದು, ಅದು ಮುಹಮ್ಮದರಿಗೆ ವ್ಯಕ್ತಿನಿಷ್ಠವಾಗಿದೆ. ಮಸ್ಲಿಮರು ಕುರ್ ಆನ್ ಮೌಲ್ಯವನ್ನು ಮಾತ್ರ ಸಹಿಸುವವರಾಗಿದ್ದು, ಅದರಂತೆ ಬಾಳುತ್ತಾರೆ. ಇದು ಹಾನಿಕಾರಕ ಮತ್ತು ಮರುಭೂಮಿಯಲ್ಲಿ ಹುಟ್ಟಿದ, ಹಳೆ ಕಾಲದ ಅಸಹ್ಯವೆನಿಸುವಂತಹದ್ದು. ಮುಸ್ಲಿಮರು ತಪ್ಪು ಮಾಹಿತಿ ಮತ್ತು ನಂಬಿಕೆಯಿಂದ ವಿಶ್ವಾಸಿಗಳಾಗುತ್ತಾರೆ. ಇದು ಸೀಮಿತ ದೃಷ್ಟಿಕೋನದ್ದಾಗಿದ್ದು, ವಿಸ್ತೃತ ಹಗೆತನಕ್ಕೆ ದಾರಿಯಾಗಿದೆ. ಅವರ ಏಕ ಮೌಲ್ಯ ಗೌರವಿಸುವಿಕೆ ಇತರ ಮೌಲ್ಯಗಳನ್ನು ಟೀಕಿಸುವುದಾಗಿದ್ದು, ಅತಿವಾದಕ್ಕೆ ದಾರಿಯಾಗಿದೆ. ಇಸ್ಲಾಮಿಕ್ ಸೀಮಿತ ದೃಷ್ಟಿಕೋನವು ಅನೂಹ್ಯ ಭೀಕರತೆಯತ್ತ ನಡೆಸಿದೆ. ಬಹುತ್ವ ಮತ್ತು ಬಹು ಸಂಸ್ಕೃತಿಗಳು ಇಸ್ಲಾಂ ಮೌಲ್ಯಕ್ಕೆ ಸಮನಾದುದಲ್ಲ ಎಂದು ಮುಸ್ಲಿಮರು ಒತ್ತಿ ಹೇಳುತ್ತಾರೆ.

ಜಿಹಾದ್ ಉಗ್ರಗಾಮಿಗಳು ಮಾನವತೆಯ ವಿರುದ್ಧ ಹೀನ ಅಪರಾಧಗಳನ್ನು ನಡೆಸುತ್ತಾರೆ. ಮೂರ್ಖ, ದಾರಿ ತಪ್ಪಿದ ಇವರು ಅರ್ಥವಿಲ್ಲದ್ದಕ್ಕೆ ಜೀವ ತೆರುತ್ತಾರೆ. ಜಿಹಾದಿಗಳು ಜೀವ ಬಲಿದಾನವನ್ನೂ ಸರಿ ಎನ್ನುತ್ತಾರೆ. ಇಸ್ಲಾಂ ಮೌಲ್ಯಕ್ಕೆ ಮಾತ್ರ ವಿಧೇಯರಾಗಿರುವವರು ಹೆಚ್ಚು ಅಪಾಯಕಾರಿಗಳು. ಅಲ್ಲಾಹ್ ಮಾತ್ರ ಸರ್ವ ಶ್ರೇಷ್ಟ ಮತ್ತು ಕುರಾನ್ ಮೌಲ್ಯಗಳೇ ಎಲ್ಲವೂ ಎನ್ನುವ ಇಸ್ಲಾಮಿನ ಏಕ ನಂಬಿಕೆಯು ಎಲ್ಲ ಕೆಡುಕುಗಳಿಗೆ ಮೂಲ” ಎಂದು ಪುಸ್ತಕದಲ್ಲಿ ಹೇಳಲಾಗಿದೆ.

ಈ ಬಗ್ಗೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಎಡ್ ಮಾಡುತ್ತಿರುವ ಹಲವು ವಿದ್ಯಾರ್ಥಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಒಂದು ಧರ್ಮವನ್ನು ಗುರಿಯಾಗಿಸಿಕೊಂಡಿರುವ ಪಠ್ಯವನ್ನು ಬಲವಂತವಾಗಿ ವಿದ್ಯಾರ್ಥಿಗಳಿಗೆ ಕಲಿಸುವುದು ಮಾತ್ರವನ್ನು ಅದನ್ನು ಕಡ್ಡಾಯವಾಗಿಸಿರುವುದು ಖಂಡನೀಯ. ಈ ಪುಠ್ಯವನ್ನು ವಿಶ್ವವಿದ್ಯಾಲಯ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿದ್ಯಾರ್ಥಿನಿಯೊಬ್ಬರು -“ಪ್ರಸ್ತುತ-“ದೊಂದಿಗೆ ಮಾತನಾಡಿ, ಶಾಂತಿ, ಸಹಬಾಳ್ವೆಯನ್ನು ಬೋಧಿಸುವ ಇಸ್ಲಾಮ್ ನ ಕುರಿತು ಪೂರ್ವಗ್ರಹ ಪೀಡಿತ ವ್ಯಕ್ತಿ ಬರೆದ ಪುಸ್ತಕವನ್ನು ಪಠ್ಯಪುಸ್ತಕವಾಗಿ ಆಯ್ಕೆ ಮಾಡಿಕೊಂಡ ಉದ್ದೇಶವೇ ಪ್ರಶ್ನಾರ್ಹವಾಗಿದೆ. ಸಂಕುಚಿತ ಮನೋಭಾವ ಎಂಬ ಪಠ್ಯದಲ್ಲಿ ಇಸ್ಲಾಮ್ ಧರ್ಮವನ್ನು ಉದಾಹರಣೆಯಾಗಿ ನೀಡಿ ಸುಳ್ಳು ವಿವರಣೆ ನೀಡಲಾಗಿದೆ. ನಿಜಕ್ಕೂ ಇದು ಖಂಡನೀಯ. ಈ ಬಗ್ಗೆ ಧ್ವನಿ ಎತ್ತಬೇಕಾಗಿದೆ ಎಂದು ತಿಳಿಸಿದರು.

ಮತ್ತೋರ್ವ ವಿದ್ಯಾರ್ಥಿನಿ ಪ್ರತಿಕ್ರಿಯಿಸಿ, ಇಸ್ಲಾಮ್ ಧರ್ಮದ ಬಗ್ಗೆ ಇಲ್ಲ ಸಲ್ಲದ ಹಾಗೂ ಸುಳ್ಳು ವಿಷಯಗಳನ್ನು ಪಠ್ಯದಲ್ಲಿ ಸೇರಿಸಿ ವಿದ್ಯಾರ್ಥಿಗಳಿಗೆ ಬಲವಂತವಾಗಿ ಓದುವಂತೆ ಮಾಡಿರುವುದರ ಹಿಂದೆ ಷಡ್ಯಂತ್ರವಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಹಲವು ವಿದ್ಯಾರ್ಥಿ ಸಂಘಟನೆಗಳು ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಬೃಹತ್ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿವೆ.

Join Whatsapp