ಫತೋರ್ಡ [ಗೋವಾ] : ಇಂಡಿಯನ್ ಸೂಪರ್ ಲೀಗ್-ಐಎಸ್’ಎಲ್ ಫುಟ್ಬಾಲ್ ಟೂರ್ನಿಯಲ್ಲಿ ಹೈದರಾಬಾದ್ ಎಫ್‌ಸಿ ತಂಡವು ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಹೈದರಾಬಾದ್ ತಂಡವು ಬಲಿಷ್ಠ ಕೇರಳ ಬ್ಲಾಸ್ಟರ್ಸ್ ತಂಡವನ್ನು
ಪೆನಾಲ್ಟಿ ಶೂಟೌಟ್’ನಲ್ಲಿ ರೋಚಕವಾಗಿ ಮಣಿಸಿ ಸಂಭ್ರಮಿಸಿತು.
ಪಂದ್ಯದ ಪೂರ್ಣಾವಧಿಯ ಮುಕ್ತಾಯದ ವೇಳೆಗೆ ಉಭಯ ತಂಡಗಳು ತಲಾ 1 ಗೋಲು ಗಳಿಸಿ ಸಮಬಲ ಸಾಧಿಸಿದ್ದವು. ಹೀಗಾಗಿ ಪಂದ್ಯವು ಹೆಚ್ಚುವರಿ ಸಮಯಕ್ಕೆ ಮುಂದೂಡಲ್ಪಟ್ಟಿತ್ತು. ಹೆಚ್ಚುವರಿ ಸಮಯದಲ್ಲೂ ಗೋಲು ಗಳಿಸಲು ಉಭಯ ತಂಡಗಳು ವಿಫಲವಾಯಿತು. ಅಂತಿಮವಾಗಿ ಪೆನಾಲ್ಟಿ ಶೂಟೌಟ್’ನಲ್ಲಿ ಹೈದರಾಬಾದ್ ತಂಡ 3-1 ಅಂತರದಲ್ಲಿ ವಿಜಯ ಪತಾಕೆಯನ್ನು ಹಾರಿಸಿತು.
ಕೇರಳ ಬ್ಲಾಸ್ಟರ್ಸ್ ತಂಡದ ಮೂರು ಪೆನಾಲ್ಟಿಗಳನ್ನು ತಡೆಯುವಲ್ಲಿ ಯಶಸ್ವಿಯಾದ ಗೋಲ್ ಕೀಪರ್ ಲಕ್ಷ್ಮೀಕಾಂತ್ ಕಟ್ಟಿಮನಿ ಹೈದರಾಬಾದ್ ಪಾಲಿಗೆ ಹೀರೋ ಆದರು. ಮತ್ತೊಂದೆಡೆ 2014 ,2016 ಸೇರಿದಂತೆ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿದ್ದ ಕೇರಳ ಬ್ಲಾಸ್ಟರ್ಸ್ ತಂಡವು ಅಪಾರ ಅಭಿಮಾನಿಗಳೆದುರು ದಿಟ್ಟ ಹೋರಾಟದ ಪ್ರದರ್ಶನ ನೀಡಿದರೂ ಪ್ರಶಸ್ತಿಯಿಂದ ದೂರವೇ ಉಳಿಯಿತು.