ಅಲ್ ಖೋಬಾರ್: ಗಾಂಧಿ ಜಯಂತಿ ಪ್ರಯುಕ್ತ ಇಂಡಿಯನ್ ಸೋಶಿಯಲ್ ಫೋರಂ ದಮ್ಮಾಮ್ ವತಿಯಿಂದ “ ಪ್ರಸಕ್ತ ಭಾರತದಲ್ಲಿ ಗಾಂಧಿ ತತ್ವದ ಪ್ರಸ್ತುತತೆ” ಎಂಬ ವಿಷಯದ ಕುರಿತು ಕಾರ್ಯಾಗಾರ ಏರ್ಪಡಿಸಲಾಗಿತ್ತು. ಇಂಡಿಯನ್ ಸೋಶಿಯಲ್ ಫೋರಮ್ ದಮ್ಮಾಮ್ ರಾಜ್ಯಾಧ್ಯಕ್ಷ ಮೀರಾಜ್ ಗುಲ್ಬರ್ಗ ದಿಕ್ಸೂಚಿ ಭಾಷಣ ಮಾಡಿ, ಪ್ರಸಕ್ತ ಭಾರತಕ್ಕೆ ಮಹಾತ್ಮಾ ಗಾಂಧಿಯವರ ಆದರ್ಶ ಯಾವ ರೀತಿ ಅನ್ವಯವಾಗುತದೆ ಎಂದು ವಿವರಿಸಿದರು.
ನಾರ್ತ್ ಕರ್ನಾಟಕ ಬ್ಲಾಕ್ ನ ಜನರಲ್ ಸೆಕ್ರೆಟರಿ ಮುನೀರ್ ಮೈಸೂರು ಮಾತನಾಡಿ, ಗೋಡ್ಸೆಯ ವಿಕೃತತೆ ಮತ್ತು ಆತ ಬ್ರಿಟಿಷರ ಬಳಿ ಕ್ಷಮೆಯಾಚನೆಗೈದು ಭಾರತದ ವಿರುದ್ಧ ಕೆಲಸ ಮಾಡಿದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಇಂಡಿಯಾ ಫೆಟರ್ನಿಟಿ ಫೋರಮ್, ದಮ್ಮಾಮ್ ಜಿಲ್ಲಾ ಅಧ್ಯಕ್ಷ ಸಾಜಿದ್ ವಳವೂರು ಮಾತನಾಡಿ, ಗಾಂಧೀಜಿಯವರ ತತ್ವಗಳು ಇಂದಿಗೂ ಹೇಗೆ ಪ್ರಸ್ತುತವಾಗಿದೆ ಎಂಬುದನ್ನು ವಿವರಿಸಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರು ಕಂಡಿದ್ದ ಕನಸನ್ನು ನುಚ್ಚು ನೂರು ಮಾಡುತ್ತಿದ್ದು, ಈ ಸಂದರ್ಭದಲ್ಲಿ ಮತ್ತೊಂದು ಸ್ವಾತಂತ್ರ್ಯ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
ಇಂಡಿಯನ್ ಸೋಶಿಯಲ್ ಫೋರಮ್ ದಮ್ಮಾಮ್ ರಾಜ್ಯ ಕಾರ್ಯಕಾರಿ ಸದಸ್ಯ ಡಾ. ಸಜ್ಜದ್ ಬೆಂಗಳೂರು ಮಾತನಾಡಿ ಬುದ್ಧಿಜೀವಿಗಳು ಹೋರಾಟ ರಂಗಕ್ಕೆ ಬರಬೇಕೆಂದು ಕರೆಕೊಟ್ಟರು. ಇಂಡಿಯನ್ ಸೋಶಿಯಲ್ ಫೋರಮ್ ದಮ್ಮಾಮ್ ರಾಜ್ಯ ಕಾರ್ಯಕಾರಿ ಸದಸ್ಯ ಸಲಾವುದ್ದೀನ್ ಮೈಸೂರು ಮಾತನಾಡಿ, ಫ್ಯಾಶಿಸ್ಟ್ ಶಕ್ತಿಗಳು ಹೇಗೆ ಭಾರತ ದೇಶವನ್ನು ನಾಶಗೊಳಿಸುತ್ತಿದೆ ಎಂಬುದನ್ನು ಅಂಕಿ ಅಂಶಗಳು ಮತ್ತು ದಾಖಲೆಗಳ ಮೂಲಕ ವಿವರಿಸಿದರು.
ಸರ್ದಾರ್ ಷರೀಫ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು. ಜಾಕೀರ್ ಗುಲ್ಬರ್ಗ ಇಸ್ಲಾಮಿನಲ್ಲಿ ಹೋರಾಟದ ಹಾದಿ ಕುರಿತು ವಿವರಿಸಿ, ವಂದಿಸಿದರು.