Home ಟಾಪ್ ಸುದ್ದಿಗಳು ನಿಮ್ಮ ಭೇಟಿ ವಿಕಾಸ ದರ್ಶನಕ್ಕೋ, ವಿನಾಶ ದರ್ಶನಕ್ಕೋ?

ನಿಮ್ಮ ಭೇಟಿ ವಿಕಾಸ ದರ್ಶನಕ್ಕೋ, ವಿನಾಶ ದರ್ಶನಕ್ಕೋ?

►ಮಂಗಳೂರಿಗೆ ಬರುತ್ತಿರುವ ಮೋದಿಗೆ ಸಿದ್ದರಾಮಯ್ಯರಿಂದ ಸರಣಿ ಪ್ರಶ್ನೆ

ಬೆಂಗಳೂರು: ಮಂಗಳೂರಿಗೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಟ್ವಿಟರ್, ಫೇಸ್ಬುಕ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.


ಸನ್ಮಾನ್ಯ ಪ್ರಧಾನಮಂತ್ರಿ Narendra Modi ಯವರಿಗೆ ಮಂಗಳೂರಿಗೆ ಸ್ವಾಗತ. ನಿಮ್ಮ ಭೇಟಿ ವಿಕಾಸ ದರ್ಶನಕ್ಕೋ, ವಿನಾಶ ದರ್ಶನಕ್ಕೋ?
ನಿಮ್ಮ ಇಂದಿನ ಭಾಷಣದಲ್ಲಿ ಈ ಪ್ರಶ್ನೆಗೆ ಉತ್ತರ ಕೊಡಬೇಕೆಂದು ವಿನಯಪೂರ್ವಕ ಮನವಿ.


ದಕ್ಷಿಣ ಕನ್ನಡದ ಉದ್ಯಮ ಶೀಲ ಹಿರಿಯರು ಸಿಂಡಿಕೇಟ್, ಕಾರ್ಪೋರೇಷನ್, ವಿಜಯಾ, ಕೆನರಾ ಮತ್ತು ಕರ್ನಾಟಕ ಹೀಗೆ ಐದು ಬ್ಯಾಂಕ್ ಗಳನ್ನು ಹುಟ್ಟುಹಾಕಿದ್ದರು. ನೀವು ಇವುಗಳಲ್ಲಿ ಮೂರು ಬ್ಯಾಂಕುಗಳ ನಾಮಾವಶೇಷ ಮಾಡಿದ್ದೀರಿ. ಇದು ವಿಕಾಸವೋ? ವಿನಾಶವೋ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.


ಕಾರ್ಪೋರೇಷನ್ ಬ್ಯಾಂಕ್ ಸ್ಥಾಪಕರು- ಹಾಜಿ ಅಬ್ದುಲ್ಲಾ (1906),
ಸಿಂಡಿಕೇಟ್ ಬ್ಯಾಂಕ್ ಸ್ಥಾಪಕರು ಟಿಎಂಎ ಪೈ, ಉಪೇಂದ್ರ ಪೈ, ವಾಮನ್ ಕುಡ್ವಾ (1925).
ವಿಜಯಾ ಬ್ಯಾಂಕ್ ಸ್ಥಾಪಕರು- ಎ.ಬಿ.ಶೆಟ್ಟಿ (1931).
ಪ್ರಧಾನಿಯವರೇ, ನಿಮ್ಮ ನಡೆ ಈ ಅಮರವೀರರಿಗೆ ಬಗೆದ ದ್ರೋಹವಲ್ಲವೇ?
ಇದು ವಿಕಾಸವೋ? ವಿನಾಶವೋ?


ಬಜ್ಪೆ ವಿಮಾನ ನಿಲ್ದಾಣ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಕೊಡುಗೆ.(25-12-1971) ಇದು ಸಂಸದ ಯು.ಶ್ರೀನಿವಾಸ ಮಲ್ಯ ಪ್ರಯತ್ನದ ಫಲ. ಈ ವಿಮಾನ ನಿಲ್ದಾಣವನ್ನು ಉದ್ಯಮಿ ಮಿತ್ರ ಅದಾನಿಯವರಿಗೆ ಅರ್ಪಿಸಿದ್ದು (20-10-2020) ಪ್ರಧಾನಿ ನರೇಂದ್ರ ಮೋದಿ. ಇದು ವಿಕಾಸವೋ? ವಿನಾಶವೋ? ಎಂದು ಕೇಳಿದ್ದಾರೆ.
ನವಮಂಗಳೂರು ಬಂದರು ಮಾಜಿ ಪ್ರಧಾನಿ ಇಂದಿರಾಗಾಂಧಿ ಕೊಡುಗೆ (1975). ಇದು ಸಂಸದ ಯು.ಶ್ರೀನಿವಾಸ ಮಲ್ಯ ಪ್ರಯತ್ನದ ಫಲ.


ನವಮಂಗಳೂರು ಬಂದರನ್ನು ಉದ್ಯಮಿ ಮಿತ್ರ ಅದಾನಿಯವರಿಗೆ ಹಂತಹಂತವಾಗಿ ಮಾರುತ್ತಿರುವುದು ಪ್ರಧಾನಿ ನರೇಂದ್ರ ಮೋದಿ. ಇದು ವಿಕಾಸನೋ? ವಿನಾಶನೋ? ಎಂದು ಪ್ರಶ್ನಿಸಿದ್ದಾರೆ.
ಬಜ್ಪೆ ವಿಮಾನ ನಿಲ್ದಾಣ, ಎನ್ ಎಂಪಿಟಿ, ಎನ್ ಎಚ್-66, ರೀಜನಲ್ ಎಂಜನಿಯರಿಂಗ್ ಕಾಲೇಜ್, ಎಂಸಿಎಫ್-ಇವೆಲ್ಲ ಕಾಂಗ್ರೆಸ್ ಸಂಸದರ ಕೊಡುಗೆ. ಬಿಜೆಪಿ ಸಂಸದ ನಳಿನ್ ಕುಮಾರ ಕೊಡುಗೆ ಏನು? ಮಳೆಯಲ್ಲಿ ಮುಳುಗುವ ಮಂಗಳೂರು? ಕೋಮುದ್ವೇಷದ ಬೆಂಕಿಯಲ್ಲಿ ಬೇಯುತ್ತಿರುವ ಮಂಗಳೂರು? ಇದು ವಿಕಾಸವೋ? ವಿನಾಶನೋ? ಎಂದು ಕುಟುಕಿದ್ದಾರೆ.
ದಕ್ಷಿಣ ಕನ್ನಡದ ವಿಕಾಸ ಪುರುಷರು ಕಾಂಗ್ರೆಸ್ ಸಂಸದರಾಗಿದ್ದ ಉಳ್ಳಾಲ ಶ್ರೀನಿವಾಸ ಮಲ್ಯ, ಕೆಮ್ತೂರು ಕಾಂತಪ್ಪ ಶೆಟ್ಟಿ ಮತ್ತು ಬೋಳಾರ ಜನಾರ್ದನ ಪೂಜಾರಿ. ದಕ್ಷಿಣ ಕನ್ನಡದ ವಿನಾಶ ಪುರುಷ- ಬಿಜೆಪಿ ಸಂಸದ ನಳಿನ್ ಕುಮಾರ ಕಟೀಲ್. ಇದು ವಿಕಾಸವೋ? ವಿನಾಶವೋ? ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.


ಜೂನ್ ತಿಂಗಳೊಂದರಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದುವರೆ ಕೋಟಿ ಬೆಲೆಯ ಮಾದಕದ್ರವ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾದಕದ್ರವ್ಯ ಸೇವನೆಯಲ್ಲಿ ದೇಶದಲ್ಲಿಯೇ ದಕ್ಷಿಣ ಕನ್ನಡ ಎರಡನೇ ಸ್ಥಾನದಲ್ಲಿದೆ. ಇದು ವಿಕಾಸನೋ? ವಿನಾಶನೋ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲೆಯ ಮಳೆಯಾಗಿದೆ. ಹೆಜ್ಜೆಹೆಜ್ಜೆಗೂ ಗುಂಡಿಬಿದ್ದ ರಸ್ತೆಗಳು, ಕುಸಿದು ಬಿದ್ದಿರುವ ಮನೆಗಳು, ನೆರೆಯಲ್ಲಿ ಕೊಚ್ಚಿಹೋದ ರೈತರ ಬೆಳೆಗಳು.. ಪ್ರಧಾನಿ ಭೇಟಿಗಾಗಿ ಮಳೆ ಹುಳುಕನ್ನು ಮುಚ್ಚಿಟ್ಟು ರಸ್ತೆಗಳಿಗೆ ತೇಪೆ ಹಾಕಲಾಗಿದೆ. ಇದು ವಿಕಾಸನೋ? ವಿನಾಶನೋ?
ಕಳೆದ ಮೂರು ವರ್ಷಗಳಲ್ಲಿ ಕಡಲ್ಕೊರೆತ ತಡೆಗೆ ರಾಜ್ಯ ಸರ್ಕಾರ ಖರ್ಚು ಮಾಡಿರುವ ಹಣ ಅಂದಾಜು ರೂ.250 ಕೋಟಿ. ಇದರಲ್ಲಿ 40% ಜನಪ್ರತಿನಿಧಿಗಳ ಜೇಬಿಗೆ, 60% ಕಡಲ ನೀರಿಗೆ. ಕಡಲ್ಕೊರೆತ ಮುಂದುವರಿದಿದೆ. ಇದು ವಿಕಾಸವೋ? ವಿನಾಶನೋ? ಎಂದು ಕೇಳಿದ್ದಾರೆ.


ಕರಾವಳಿ ಮೀನುಗಾರರ ಮೇಲೆ ಸಿಆರ್ ಜೆಡ್, ಸಿಎಂ ಜೆಡ್ ನಿಯಮಾವಳಿಗಳ ಹೇರಿಕೆ. ಪ್ರವಾಸೋದ್ಯಮದ ಹೆಸರಲ್ಲಿ ರೆಸಾರ್ಟ್, ಥೀಮ್ ಪಾರ್ಕ್ ಗಳಿಗೆ ಮುಕ್ತ ಪರವಾನಿಗೆ, ಇದು ವಿಕಾಸನೋ? ವಿನಾಶನೋ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
48 ಕಿ.ಮೀ. ಅಂತರದಲ್ಲಿ ಬ್ರಹ್ಮರಕೂಟ್ಲು, ಸುರತ್ಕಲ್, ತಲಪಾಡಿ ಮತ್ತು ಹೆಜಮಾಡಿಗಳಲ್ಲಿ 4 ನಿಯಮಬಾಹಿರ ಟೋಲ್ ಗೇಟ್ ಗಳು. ವಾಹನ ಸಂಚಾರಿಗಳ ಜೇಬು ಖಾಲಿ, ಅಕ್ರಮದ ರೂವಾರಿಗಳಾದ ಬಿಜೆಪಿ ಸಂಸದರು ಮತ್ತು ಶಾಸಕರ ಜೇಬು ಭರ್ತಿ. ಇದು ವಿಕಾಸನೋ? ವಿನಾಶನೋ? #AnswerMadiModi ಎಂದು ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

Join Whatsapp
Exit mobile version