Home ಟಾಪ್ ಸುದ್ದಿಗಳು ಸೈನಿಕರಿಗೆ ಪಿಂಚಣಿ ಕೊಡದಷ್ಟು ನಮ್ಮ ದೇಶ ನಿರ್ಗತಿಕವೇ?: ಅಗ್ನಿಪಥ್ ವಿರುದ್ಧ ದಿನೇಶ್ ಗುಂಡೂರಾವ್ ಟೀಕೆ

ಸೈನಿಕರಿಗೆ ಪಿಂಚಣಿ ಕೊಡದಷ್ಟು ನಮ್ಮ ದೇಶ ನಿರ್ಗತಿಕವೇ?: ಅಗ್ನಿಪಥ್ ವಿರುದ್ಧ ದಿನೇಶ್ ಗುಂಡೂರಾವ್ ಟೀಕೆ

ಬೆಂಗಳೂರು: ಸೇನೆಯ ಅಲ್ಪಾವಧಿ ನೇಮಕ ಯೋಜನೆ ‘ಅಗ್ನಿಪಥ್’ ವಿರುದ್ಧ ದೇಶಾದ್ಯಂತ ಯುವಕರ ಆಕ್ರೋಶ ಭುಗಿಲೆದ್ದಿದೆ. ಯುವಕರ ಆಕ್ರೋಶ ಸಹಜವಾದದ್ದೆ. ಕಳೆದ ಎರಡು ವರ್ಷಗಳಿಂದ ಸೇನೆಗೆ ನೇಮಕಾತಿ ನಡೆದಿಲ್ಲ. ಈಗ #AgnipathScheme ಮೂಲಕ ನೇಮಕಾತಿಯಾದರೂ ಅದು ಅಲ್ಪಾವಧಿಯಷ್ಟೆ. ಕೇವಲ ನಾಲ್ಕು ವರ್ಷಕ್ಕೆ ಕಡ್ಡಾಯ ನಿವೃತ್ತಿಯಾಗಬೇಕು.ಆ ನಂತರ ಯುವಕರ ಭವಿಷ್ಯವೇನು? ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.


ಸರಣಿ ಟ್ವೀಟ್ ಮಾಡಿರುವ ಅವರು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರುವುದೇ ಬಡ ಮಧ್ಯಮ ವರ್ಗದ ಯುವಕರು. ಹೊಟ್ಟೆ ತುಂಬಿದ ಶ್ರೀಮಂತರ ಮಕ್ಕಳಾಗಲಿ, ನಕಲಿ ದೇಶಪ್ರೇಮದ ಭಾಷಣ ಬಿಗಿಯುವ ಸಂಘ ಪರಿವಾರದ ಹೆತ್ತ ಕುಡಿಗಳಾಗಲಿ ಸೈನ್ಯ ಸೇರುವುದಿಲ್ಲ. ಇದು ಕಟು ವಾಸ್ತವ ಎಂದು ಹೇಳಿದ್ದಾರೆ.


ಸೈನ್ಯಕ್ಕೆ ಸೇರಿದ ಬಡ ಮಧ್ಯಮ ವರ್ಗದ ಯುವಕರಿಗೆ ಸೇವಾ ಭದ್ರತೆ ಅತಿ ಅಗತ್ಯ. ಇದನ್ನು ಕೇಂದ್ರ ಅರಿಯಬೇಕು. ಸೈನಿಕರ ಪಿಂಚಣಿ ಹೊರೆ ತಪ್ಪಿಸಿಕೊಳ್ಳಲು ಕೇಂದ್ರ ಅಗ್ನಿಪಥ್ ಯೋಜನೆ ಜಾರಿಗೆ ಮುಂದಾಗಿದೆ. ದೇಶದ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಸೇವೆ ಮಾಡಿದ ಸೈನಿಕರಿಗೆ ಪಿಂಚಣಿ ಕೊಡದಷ್ಟು ನಮ್ಮ ದೇಶ ನಿರ್ಗತಿಕವೇ? ತಮ್ಮ ರಾಜಕೀಯ ಲಾಭಕ್ಕೆ ಯೋಧರ ತ್ಯಾಗವನ್ನು ದುರ್ಬಳಕೆ ಮಾಡಿಕೊಳ್ಳುವ ಮೋದಿಯವರಿಗೆ, ಸೈನಿಕರಿಗೆ ಪಿಂಚಣಿ ಕೊಡುವುದು ಬೇಕಿಲ್ಲವೆ? ಎಂದು ದಿನೇಶ್ ಪ್ರಶ್ನಿಸಿದ್ದಾರೆ.


ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ಮೋದಿ ಮಾತು ತಪ್ಪಿದ್ದಾರೆ. ಈಗ ಸಾರ್ವತ್ರಿಕ ಚುನಾವಣೆ ಹತ್ತಿರವಿರುವುದರಿಂದ ಮತ್ತೊಂದು ನಾಟಕಕ್ಕೆ ತಾಲೀಮು ನಡೆಸುತ್ತಿದ್ದಾರೆ. ಅಗ್ನಿಪಥ್ ಯೋಜನೆ ಮೂಲಕ ಸೇನೆಯಲ್ಲಿ ಕಾಲ್ಪನಿಕ ಹುದ್ದೆ ಸೃಷ್ಟಿಸುವುದು ಈ ನಾಟಕದ ಒಂದು ಭಾಗ. ಆದರೆ ಮೋದಿಯವರ ಈ ನಾಟಕ ನಂಬಲು ಯುವಕರು ಮೂರ್ಖರಲ್ಲ ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಕೇಂದ್ರದ ನೀತಿಯನ್ನು ಖಂಡಿಸಿದ್ದಾರೆ.

Join Whatsapp
Exit mobile version