ಏಕದಿನ ಸರಣಿ: ಇಂಗ್ಲೆಂಡ್‌ ನೆಲದಲ್ಲಿ ಭಾರತದ ಐತಿಹಾಸಿಕ ಕ್ಲೀನ್‌ಸ್ವೀಪ್‌ ಸಾಧನೆ

Prasthutha|

ಲಾರ್ಡ್ಸ್‌: ಇಂಗ್ಲೆಂಡ್‌ ಮಹಿಳಾ ತಂಡದ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲೂ ಹರ್ಮನ್‌ಪ್ರೀತ್‌ ಕೌರ್‌ ತಂಡ ಜಯಭೇರಿ ಭಾರಿಸಿದೆ. ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ, ಕಾಟೆ ಕ್ರೀಸ್‌ ಬಳಗವನ್ನು 16 ರನ್‌ಗಳಿಂದ ಮಣಿಸಿತು. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 3-0 ಅಂತರದಿಂದ ʻಕ್ಲೀನ್‌ಸ್ವೀಪ್‌ʼ ಸಾಧನೆಯೊಂದಿಗೆ ಸರಣಿಗೆ ಮುಕ್ತಾಯ ಕಂಡಿತು.

- Advertisement -

ಭಾರತದ ಮಹಿಳಾ ತಂಡವೊಂದು ಇದೇ ಮೊದಲ ಬಾರಿಗೆ ಇಂಗ್ಲೆಂಡ್ ನೆಲದಲ್ಲಿ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಸಾಧನೆ ಮಾಡಿದೆ. ಏಕದಿನ ಸರಣಿಗೂ ಮುನ್ನ ನಡೆದ ಟಿ20 ಸರಣಿಯಲ್ಲಿ ಭಾರತ 2- 1 ಅಂತರದಲ್ಲಿ ಇಂಗ್ಲೆಂಡ್ ತಂಡಕ್ಕೆ ಶರಣಾಗಿತ್ತು.

ಭಾರತ ನೀಡಿದ್ದ 170 ರನ್‌ಗಳ ಸಾಮಾನ್ಯ ಗುರಿಯನ್ನು ಬೆನ್ನಟ್ಟಲು ತಡಬಡಿಸಿದ ಇಂಗ್ಲೆಂಡ್‌, 43. 3 ಓವರ್‌ಗಳಲ್ಲಿ 153 ರನ್‌ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು.

- Advertisement -

ಕೊನೆಯ ವಿಕೆಟ್‌ ವಿವಾದ

ಇಂಗ್ಲೆಂಡ್‌ ಗೆಲುವಿಗೆ ಹೋರಾಟವನ್ನು ಚಾಲ್ತಿಯಲ್ಲಿರಿಸಿದ್ದ ಚಾರ್ಲಿ ಡೀನ್‌, ಕೊನೆಯವರಾಗಿ ರನೌಟ್‌‌ (ಮಂಕಡಿಂಗ್) ರೂಪದಲ್ಲಿ ನಿರ್ಗಮಿಸಿದರು. ಆದರೆ ದೀಪ್ತಿ ಶರ್ಮಾ ಬೌಲಿಂಗ್‌ ವೇಳೆ ನಾನ್‌ಸ್ಟ್ರೈಕ್‌ನಲ್ಲಿದ್ದ ಡೀನ್‌, ಬೌಲ್‌ ಮಾಡುವ ಮೊದಲೇ ಕ್ರೀಸ್‌ ಬಿಟ್ಟಿದ್ದರು. ಈ ವೇಳೆ ಶರ್ಮಾ, ಚೆಂಡನ್ನು ವಿಕೆಟ್‌ಗೆ ತಾಗಿಸಿದರು. ಡೀನ್‌ ಕ್ರೀಸ್‌ನಲ್ಲಿರಲಿಲ್ಲ. ಮೂರನೇ ಅಂಪೈರ್‌ ಔಟ್‌ ತೀರ್ಪು ನೀಡಿದರು. ಮಂಕಡಿಂಗ್ ಅನ್ನು ಐಸಿಸಿ, ಇತ್ತೀಚೆಗಷ್ಟೇ ರನೌಟ್‌ ವಿಭಾಗಕ್ಕೆ ಸೇರಿಸಿದೆ. ಕ್ರಿಕೆಟ್‌ ನಿಯಮಗಳ ಪ್ರಕಾರ ಶರ್ಮಾ ಮಾಡಿದ್ದು ಸರಿ ಎನಿಸಿದರೂ, ಆಟದ ಘನತೆಗೆ ತಕ್ಕುದಾಗಿಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೂಲನ್‌ ಗೋಸ್ವಾಮಿಗೆ ಸ್ಮರಣೀಯ ವಿದಾಯ

ಎರಡು ದಶಕಗಳ ಕಾಲ ಭಾರತೀಯ ಕ್ರಿಕೆಟ್‌ ತಂಡದ ಅವಿಭಾಜ್ಯ ಅಂಗವಾಗಿದ್ದ ವೇಗದ ಬೌಲರ್‌ ಜೂಲನ್‌ ಗೋಸ್ವಾಮಿಗೆ ಲಾರ್ಡ್ಸ್‌ನಲ್ಲಿ ಸ್ಮರಣೀಯ ವಿದಾಯ ಲಭಿಸಿತು. ಅಂತಿಮ ಪಂದ್ಯದಲ್ಲೂ 10 ಓವರ್‌ ಎಸೆದ ಗೋಸ್ವಾಮಿ, 30 ರನ್‌ ನೀಡಿ 2 ವಿಕೆಟ್‌ ಪಡೆದು ಸಂಭ್ರಮಿಸಿದರು. ಇದರಲ್ಲಿ ಮೂರು ಓವರ್‌ ಮೇಡನ್‌ ಆಗಿತ್ತು ಎಂಬುದು ವಿಶೇಷ.

ಇಂಗ್ಲೆಂಡ್‌ ಹೋರಾಟ

ಒಂದು ಹಂತದಲ್ಲಿ ಇಂಗ್ಲೆಂಡ್‌ 103 ರನ್‌ ಗಳಿಸುವಷ್ಟರಲ್ಲೇ 8 ವಿಕೆಟ್‌ ಕಳೆದುಕೊಂಡಿತ್ತು. ಆದರೆ ಚಾರ್ಲಿ ಡೀನ್‌ ಏಕಾಂಗಿ ಹೋರಾಟದ ಮೂಲಕ ಭಾರತದ ಬೌಲರ್‌ಗಳ ಬೆವರಿಳಿಸಿದರು. 80 ಎಸೆತಗಳನ್ನು ಎದುರಿಸಿದ ಡೀನ್‌, 5 ಬೌಂಡರಿಗಳ ನೆರವಿನಿಂದ 47 ರನ್‌ ಗಳಿಸಿ ಕೊನೆಯವರಾಗಿ ನಿರ್ಗಮಿಸಿದರು.  ಡೀನ್‌ಗೆ ಉತ್ತಮ ಸಾಥ್‌ ಕೊಟ್ಟ ಕಾಟೆ ಕ್ರೂಸ್‌ ಮತ್ತು ಫ್ರೇಯಾ ಡೇವಿಸ್‌ ತಲಾ 10 ಅಮೂಲ್ಯ ರನ್‌ ಗಳಿಸಿದರು. 6 ಮಂದಿ ಆಂಗ್ಲ ಬ್ಯಾಟರ್‌ಗಳು ಎರಡಂಕಿಯ ಮೊತ್ತವನ್ನು ದಾಟಲಿಲ್ಲ.

ಭಾರತ 169 ರನ್‌ಗಳಿಗೆ ಆಲೌಟ್‌

ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ ನಡೆಸಿದ್ದ ಹರ್ಮನ್‌ ಪ್ರೀತ್‌ ಕೌರ್‌ ಬಳಗ, 45.4 ಓವರ್‌ಗಳಲ್ಲಿ  169 ರನ್‌ಗಳಿಗೆ ಇನ್ನಿಂಗ್ಸ್‌ ಮುಗಿಸಿತ್ತು.

Join Whatsapp