ಕಲ್ಲೀಕೋಟೆ: ನಾಗರಿಕ ಸೇವಾ ತರಬೇತಿ ತರಗತಿಯೊಂದರಲ್ಲಿ ಐಪಿಎಸ್ ಅಧಿಕಾರಿ ಎಡಿಜಿಪಿ ಎಸ್ ಶ್ರೀಜಿತ್ ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ ಘಟನೆ ನಡೆದಿದೆ.
ಈ ಕುರಿತ ವೀಡಿಯೋವನ್ನು UPSC ಕೇರಳದ YouTube ಪೇಜ್’ನಲ್ಲಿ ಹಂಚಿಕೊಳ್ಳಲಾಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಶ್ರೀಜಿತ್ UPSC ತರಬೇತಿಯ ತರಗತಿಯಲ್ಲಿದ್ದ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರನ್ನು ಕರೆದು ನಿಮ್ಮ ತರವಾಡ್(ಮೂಲಸ್ಥಾನ) ಮನೆಯಲ್ಲಿ ಯಾರೆಲ್ಲಾ ಇದ್ದಾರೆ? ಎಂದು ಕೇಳಿದಾಗ ಕುಟುಂಬದ ಎಲ್ಲಾ ಸದಸ್ಯರು ಇದ್ದಾರೆ ಎಂದು ವಿದ್ಯಾರ್ಥಿನಿ ಉತ್ತರಿಸುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಜಿತ್, ‘ಫಿದಾ(ವಿದ್ಯಾರ್ಥಿನಿ ಹೆಸರು) ನಿನಗೆಲ್ಲಿಯ ತರವಾಡ್? ನೀನು ಮುಸ್ಲಿಮ್ ಅಲ್ಲವೇ? ಮುಸಲ್ಮಾನರಿಗೆ ತರವಾಡ್ ಎಂಬುದೇ ಇಲ್ಲ. ಈ ತರವಾಡ್ ಎಂಬುದು ನಾಯನ್ಮಾರ್(ವೈಷ್ಣವ ಪಂಥ) ಪರಿಕಲ್ಪನೆಯಾಗಿದೆ. ತರವಾಡ್ ಎಂಬ ಪದವು ನಾಯನ್ಮಾರ್ ಸಮುದಾಯದ ಪದವಾಗಿದೆ. ಉಳಿದವರೆಲ್ಲಾ ಅದನ್ನು ಅನುಸರಿಸಿಕೊಂಡು ಬಂದಿದ್ದಾರೆ. ಕೇರಳದಲ್ಲಿ ನಾಯನ್ಮಾರ್ ಪ್ರಬಲ ಸಮುದಾಯವಾಗಿದ್ದು, ಇತರ ಸಮುದಾಯಗಳು ಅವರ ಆಚಾರಗಳನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಹುಡುಗಿ ತರವಾಡ್ ಬಗ್ಗೆ ಮಾತನಾಡುತ್ತಿದ್ದಾಳೆ. ನಿಮಗೆ ಜಾತಿ ಇಲ್ಲ ಎಂಬುದು ಗೊತ್ತಿಲ್ಲವೇ? ನಿಮ್ಮ ಪ್ರವಾದಿಗೆ ಜಾತಿ ಇತ್ತಾ? ಆದರೆ ಈಗ ನಿರ್ದಿಷ್ಟ ಜಾತಿಯ ಭಾಷೆಗಳನ್ನು ಮಾತ್ರ ಬಳಸಲಾಗುತ್ತದೆ ಎಂದು ಅವರು ವಿದ್ಯಾರ್ಥಿನಿಯನ್ನು ಹಿಯಾಳಿಸಿದ್ದಾರೆ.
ಇತ್ತೀಚೆಗೆ ಮಲಯಾಳಂ ನಟ ಸುರೇಶ್ ಗೋಪಿ ಅನ್ಯ ಧರ್ಮೀಯರ ವಿರುದ್ಧ ದ್ವೇಷ ಭಾಷಣ ಮಾಡಿದ್ದರು. ಅವರ ವಿರುದ್ಧ ದೂರು ಕೂಡ ದಾಖಲಾಗಿತ್ತು. ಇದರ ಬೆನ್ನಲ್ಲೇ ಐಪಿಎಸ್ ಅಧಿಕಾರಿಯೊಬ್ಬರು ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.