ಐಪಿಎಲ್ ಪ್ರಸಾರ ಹಕ್ಕು | ₹44,075 ಕೋಟಿಗೆ ಹರಾಜು !

Prasthutha|

ಮುಂಬೈ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಖ್ಯಾತಿಯ ಐಪಿಎಲ್ ಪಂದ್ಯಾವಳಿಯ ಟಿವಿ ಮತ್ತು ಡಿಜಿಟಲ್ ಪ್ರಸಾರ ಹಕ್ಕುಗಳ ಇ- ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಟ್ಟು ₹44,075 ಕೋಟಿಗೆ ಮಾರಾಟವಾಗಿದೆ ಎಂದು ಮೂಲಗಳು ತಿಳಿಸಿವೆ.  

- Advertisement -

2023- 27ರ ಐದು ವರ್ಷಗಳ ಅವಧಿಯ ನೇರ ಪ್ರಸಾರದ ಹಕ್ಕುಗಳನ್ನು ಎರಡು ಸಂಸ್ಥೆಗಳು ಪ್ರತ್ಯೇಕವಾಗಿ ಪಡೆದುಕೊಂಡಿವೆ. ಮೂಲಗಳ ಪ್ರಕಾರ ಟಿವಿ ಪ್ರಸಾರದ ಹಕ್ಕುಗಳನ್ನು ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ಡಿಜಿಟಲ್ ಹಕ್ಕುಗಳನ್ನು ರಿಲಾಯನ್ಸ್‌ ವಯಕಾಮ್ ಸಂಸ್ಥೆಯು ತನ್ನದಾಗಿಸಿಕೊಂಡಿದೆ. ಆ ಮೂಲಕ ವೂಟ್ ಸೆಲೆಕ್ಟ್ ಆ್ಯಪ್‌ನಲ್ಲಿ  ಐಪಿಎಲ್ ಪಂದ್ಯಗಳ ನೇರ ಪ್ರಸಾರ ವೀಕ್ಷಿಸಬಹುದಾಗಿದೆ. ಬಿಸಿಸಿಐ ಕಡೆಯಿಂದ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬೀಳಬೇಕಾಗಿದೆ. 

ಪಂದ್ಯವೊಂದಕ್ಕೆ ₹57.5 ಕೋಟಿ (ಟಿವಿ) ಮತ್ತು ₹48 ಕೋಟಿಗೆ ಡಿಜಿಟಲ್ ಪ್ರಸಾರ ಹಕ್ಕುಗಳು ಮಾರಾಟವಾಗಿದ್ದು, ಆ ಮೂಲಕ ಐಪಿಎಲ್ ಪಂದ್ಯವೊಂದರ ಮಾರುಕಟ್ಟೆ ಮೌಲ್ಯ ₹105.5 ಕೋಟಿ ಆಗಲಿದೆ. ಪ್ರತಿ ಪಂದ್ಯವೊಂದಕ್ಕೆ ₹49 ಕೋಟಿ (ಟಿವಿ ಹಕ್ಕು ) ಮತ್ತು ₹33 ಕೋಟಿ (ಡಿಜಿಟಲ್ ಹಕ್ಕು) ಮೂಲ ಬೆಲೆಯಾಗಿ ಬಿಸಿಸಿಐ ನಿಗದಿಪಡಿಸಿತ್ತು. ಕಳೆದ ಅವಧಿಯಲ್ಲಿ ಬಿಸಿಸಿಐ ಪ್ರತಿ ಪಂದ್ಯದಿಂದ ₹54 ಕೋಟಿ ಆದಾಯ ಗಳಿಸಿತ್ತು. ಭಾನುವಾರ ಆರಂಭವಾಗಿದ್ದ ಈ ಹರಾಜು ಪ್ರಕ್ರಿಯೆ ಸೋಮವಾರ ಸಂಜೆಯ ವೇಳೆ ಮುಕ್ತಾಯ ಕಂಡಿದೆ.

- Advertisement -

ಎರಡು ದಿನಗಳ ಕಾಲ ನಡೆದ ಈ ಹರಾಜು ಪ್ರಕ್ರಿಯೆಯಲ್ಲಿ 2023- 27ರ ಅವಧಿಯ ಐದು ವರ್ಷಗಳ ಅವಧಿಯಲ್ಲಿನ 410 ಐಪಿಎಲ್ ಪಂದ್ಯಗಳ ನೇರ ಪ್ರಸಾರದ ಟಿವಿ ಹಕ್ಕುಗಳು ₹23,575 ಕೋಟಿಗೆ ಮಾರಾಟವಾಗಿದೆ. ಮತ್ತೊಂದೆಡೆ ಇದೇ ಅವಧಿಯ ಡಿಜಿಟಲ್ ಪ್ರಸಾರ ಹಕ್ಕುಗಳು ₹20,500 ಕೋಟಿಗೆ ಮಾರಾಟವಾಗಿದೆ. ಡಿಜಿಟಲ್ ಹಕ್ಕುಗಳನ್ನು ಪಡೆದುಕೊಳ್ಳಲು ಡಿಸ್ನಿ+ ಹಾಟ್‌ಸ್ಟಾರ್‌ ಸಂಸ್ಥೆಯು ಕೊನೆ ಕ್ಷಣದವರೆಗೂ ಸ್ಪರ್ಧೆಯಲ್ಲಿತ್ತಾದರೂ, ವಯಾಕಾಮ್ ಬಿಡ್ ತನ್ನದಾಗಿಸಿಕೊಂಡಿದೆ. 

ಐಪಿಎಲ್‌ನ ಅಧಿಕೃತ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್ ಸಮೂಹದ ಜೊತೆಗಿನ ಐದು ವರ್ಷಗಳ ಬಿಸಿಸಿಐ ಒಪ್ಪಂದ ಈ ವರ್ಷದ ಟೂರ್ನಿಯೊಂದಿಗೆ ಅಂತ್ಯಗೊಂಡಿತ್ತು. ಹೀಗಾಗಿ ಹೊಸ ಮಾಧ್ಯಮ ಹಕ್ಕುಗಳ ಹರಾಜು ನಡೆದಿದೆ. ಹರಾಜು ಪ್ರಕ್ರಿಯೆ ಪ್ರಾರಂಭವಾಗಲು ಒಂದು ದಿನ ಬಾಕಿ ಉಳಿದಿರುವಂತೆಯೇ ಆನ್‌ಲೈನ್ ದೈತ್ಯ ಕಂಪನಿ ಅಮೆಜಾನ್, ಬಿಡ್ಡಿಂಗ್ ಪ್ರಕ್ರಿಯೆಯಿಂದ ಹಿಂದೆ ಸರಿಯುವ ಮೂಲಕ ಅಚ್ಚರಿ ಮೂಡಿಸಿತ್ತು.  2018- 22ರ ಐದು ವರ್ಷಗಳ ಅವಧಿಗೆ ಸ್ಟಾರ್ ಇಂಡಿಯಾ ಸಮೂಹವು ₹16,348 ಕೋಟಿಗೆ ಐಪಿಎಲ್ ಮಾಧ್ಯಮ ಹಕ್ಕುಗಳನ್ನು ಪಡೆದುಕೊಂಡಿತ್ತು.



Join Whatsapp