Home ಕ್ರೀಡೆ ಐಪಿಎಲ್ ನಲ್ಲಿ ಇಂದು ಡಬಲ್ ಧಮಾಕ: ಪ್ಲೇ ಆಫ್ ಪ್ರವೇಶಿಸಲು ಡೂ ಆರ್ ಡೈ ಹೋರಾಟ..!

ಐಪಿಎಲ್ ನಲ್ಲಿ ಇಂದು ಡಬಲ್ ಧಮಾಕ: ಪ್ಲೇ ಆಫ್ ಪ್ರವೇಶಿಸಲು ಡೂ ಆರ್ ಡೈ ಹೋರಾಟ..!

ದುಬೈ : 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಂದು ಅಭಿಮಾನಿಗಳಿಗೆ ಡಬಲ್ ಧಮಾಕ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದೆ. ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ರಾತ್ರಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.


ಪ್ಲೇ ಆಫ್ ಹಂತದ ಕನಸನ್ನು ಜೀವಂತ ವಾಗಿರಿಸಲು ಕೆಕೆಆರ್, ಮುಂಬೈ ಹಾಗೂ ಪಂಜಾಬ್ ತಂಡಗಳು ಮುಂದಿನ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿವೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನು ಮುಂದುವರಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆಡಿರುವ ಹತ್ತು ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದ್ದು ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಸೋಲು. ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಪ್ಲೇ ಆಫ್ ಹಂತದ ಸನಿಹಕ್ಕೆ ಬರಲಿದ್ದಾರೆ. ಡೆಲ್ಲಿ ಎದುರಾಳಿ ಕೆಕೆಆರ್, ಭಾರತದಲ್ಲಿ ನಡೆದ ಮೊದಲ ಚರಣದಲ್ಲಿ ಹೀನಾಯ ಪ್ರದರ್ಶನ ನೀಡಿದ್ದರೂ, ಯುಎಇನಲ್ಲಿ ಮೈಕೊಡವಿ ನಿಂತಿದೆ. ಸತತ ಗೆಲುವುಗಳನ್ನು ದಾಖಲಿಸುತ್ತಾ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಿದೆ.


ಅಬುಧಾಬಿಯಲ್ಲಿ ರಾತ್ರಿ ನಡೆಯಲಿರುವ ಎರಡನೇ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಹಾಲಿ ಚಾಂಪಿಯನ್ಸ್ ಆಗಿದ್ದರೂ ಮುಂಬೈ ಇಂಡಿಯನ್ಸ್ ಇದೀಗ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಕಾಣುವ ಮೂಲಕ ಪ್ಲೇ ಆಫ್ ಹಂತ ಪ್ರವೇಶಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ಅತ್ಯಂತ ನೀರಸವಾಗಿದ್ದು ಪ್ರಮುಖ ಆಟಗಾರರೆಲ್ಲರೂ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ. ಇದು ಮುಂಬೈ ಪಾಲಿಗೆ ಆತಂಕಕಾರಿ ಬೆಳವಣಿಗೆ. ಸದ್ಯ ಅಂಕಪಟ್ಟಿಯಲ್ಲಿಯೂ ಮುಂಬೈ ಇಂಡಿಯನ್ಸ್ 7ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಗೆಲುವಿನ ಹೊಸ್ತಿಲಲ್ಲಿ ಎಡವುತ್ತಿರುವ ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿದ್ದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಹೀಗಾಗಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಪ್ಲೇಆಫ್ ಹಂತಕ್ಕೇರುವ ಸ್ಪರ್ಧೆಯಲ್ಲಿ ಮತ್ತೊಂದು ಹೆಜ್ಜೆ ಮುಂದಿಡಲು ಪಂಜಾಬ್ ಕಿಂಗ್ಸ್ ಪ್ರಯತ್ನ ನಡೆಸುವುದು ನಿಶ್ಚಿತ.

Join Whatsapp
Exit mobile version