Home ಕ್ರೀಡೆ ಐಪಿಎಲ್ 2022 | ಹೈದರಾಬಾದ್ ಗೆಲುವಿಗೆ 163 ರನ್‌ಗಳ ಗುರಿ

ಐಪಿಎಲ್ 2022 | ಹೈದರಾಬಾದ್ ಗೆಲುವಿಗೆ 163 ರನ್‌ಗಳ ಗುರಿ


ಮುಂಬೈ: ಐಪಿಎಲ್‌ನ ಪಾದಾರ್ಪಣೆ ಆವೃತ್ತಿಯಲ್ಲಿ ಅಜೇಯರಾಗಿ ಮುನ್ನುಗ್ಗುತ್ತಿರುವ ಗುಜರಾತ್ ಟೈಟನ್ಸ್, ತನ್ನ 4ನೇ ಪಂದ್ಯದಲ್ಲಿ ಹೈದರಾಬಾದ್ ಗೆಲುವಿಗೆ 163 ರನ್‌ಗಳ ಗುರಿಯನ್ನು ಮುಂದಿರಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್, ನಾಯಕ ಹಾರ್ದಿಕ್ ಪಾಂಡ್ಯ ಗಳಿಸಿದ ಅಜೇಯ ಅರ್ಧಶತಕ ಮತ್ತು ಅಭಿನವ್ ಮನೋಹರ್ (35) ಬಿರುಸಿನ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ ನಷ್ಟದಲ್ಲಿ 162 ರನ್‌ಗಳಿಸಿದೆ. ಆರಂಭಿಕರಾದ ಮ್ಯಾಥ್ಯೂ ವೇಡ್ (19) ಶುಭ್‌ಮನ್‌ ಗಿಲ್ 7 ರನ್‌ಗಳಿಸಿ ನಿರ್ಗಮಿಸಿದರೆ, ಮೂರನೇ ಕ್ರಮಾಂಕದಲ್ಲಿ ಬಂದ ಯುವ ಬ್ಯಾಟರ್ ಸಾಯಿ ಸುದರ್ಶನ್ 11 ರನ್ ಗಳಿಸಿ ಟಿ. ನಟರಾಜನ್‌ಗೆ ವಿಕೆಟ್ ಒಪ್ಪಿಸಿದರು.

ಡೇವಿಡ್ ಮಿಲ್ಲರ್ ವಿಕೆಟ್ ಪತನವಾದ ಬಳಿಕ ಪಾಂಡ್ಯ ಜೊತೆಗೂಡಿದ ಮನೋಹರ್, ಜವಾಬ್ದಾರಿಯುತ ಜೊತೆಯಾಟವಾಡಿ ತಂಡದ ಮೊತ್ತವನ್ನು 150ರ ಗಡಿದಾಟಿಸಿದರು. ಫಿನಿಶರ್ ಖ್ಯಾತಿಯ ರಾಹುಲ್ ತಿವಟಾಟಿಯ 6 ರನ್‌ ಗಳಿಸಿದ್ದ ವೇಳೆ ರನೌಟ್ ಆಗಿ ನಿರ್ಗಮಿಸಿದರು.

ಹೈದರಬಾದ್ ಪರ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಟಿ.ನಟರಾಜನ್ ತಲಾ 2 ವಿಕೆಟ್ ಪಡೆದರೆ, ಮಾರ್ಕೋ ಜಾನ್ಸನ್, ಉಮ್ರಾನ್ ಮಲಿಕ್ ತಲಾ 1ವಿಕೆಟ್ ಪಡೆದರು. ಟೂರ್ನಿಯಲ್ಲಿ ಇದುವರೆಗೂ 3 ಪಂದ್ಯಗಳನ್ನಾಡಿರುವ ಹೈದರಾಬಾದ್ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮಾತ್ರವೇ ಗೆಲುವು ಸಾಧಿಸಿದ್ದು, ಅದಕ್ಕೂ ಮೊದಲಿನ ರಾಜಸ್ಥಾನ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.

Join Whatsapp
Exit mobile version