Home ಕ್ರೀಡೆ IPL-2022: ಚೆನ್ನೈ vs ಮುಂಬೈ ಇಂಡಿಯನ್ಸ್ ಮೊದಲ ಪಂದ್ಯ !?

IPL-2022: ಚೆನ್ನೈ vs ಮುಂಬೈ ಇಂಡಿಯನ್ಸ್ ಮೊದಲ ಪಂದ್ಯ !?

ಚೆನ್ನೈ: ಚುಟುಕು ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್, IPL-2022ರ ವೇಳಾಪಟ್ಟಿ ಅಂತಿಮಗೊಂಡಿದೆ. ಏಪ್ರಿಲ್ 2, 2022ರಂದು ಚೆನ್ನೈನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ ಎಂದು ಪ್ರಮುಖ ಕ್ರೀಡಾ ಸುದ್ದಿ ಸಂಸ್ಥೆ ಕ್ರಿಕ್’ಬಝ್ ವರದಿ ಮಾಡಿದೆ.

15ನೇ ಆವೃತ್ತಿಯ IPLನಲ್ಲಿ ಹತ್ತು ತಂಡಗಳು ಭಾಗವಹಿಸಲಿದ್ದು, ಒಟ್ಟು 74 ಪಂದ್ಯಗಳು ನಡೆಯಲಿವೆ. ಪ್ರತೀ ತಂಡಗಳು 7 ಪಂದ್ಯಗಳನ್ನು ತವರು ಮೈದಾನದಲ್ಲಿ ಹಾಗೂ 7 ಪಂದ್ಯಗಳನ್ನು ಎದುರಾಳಿಯ ತವರು ಮೈದಾನದಲ್ಲಿ ಆಡಲಿವೆ. ಉದ್ಘಾಟನಾ ಪಂದ್ಯ ಏಪ್ರಿಲ್ 2ರಂದು ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಹಾಗೂ ಫೈನಲ್ ಪಂದ್ಯ ಜೂನ್ 4 ಅಥವಾ 5 ರಂದು ನಡೆಯಲಿದೆ. ಈಗಿರುವ 8 ತಂಡಗಳ ಜೊತೆಗೆ ಹೊಸದಾಗಿ ಲಖ್ನೋ ಹಾಗೂ ಅಹಮದಾಬಾದ್ ತಂಡಗಳು 15ನೇ ಆವೃತ್ತಿಯ IPLನಲ್ಲಿ ಕಾಣಿಸಿಕೊಳ್ಳಲಿದ್ದು, ಟೂರ್ನಿಯು ಮತ್ತಷ್ಟು ರೋಚಕವಾಗಲಿದೆ. ಅದಾಗಿಯೂ ಈ ವೇಳಾಪಟ್ಟಿಯ ಕುರಿತಂತೆ BCCI ಕಡೆಯಿಂದ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

IPL-2022 ಆರಂಭಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದೆ. ಇನ್‌ಸೈಡ್ ಸ್ಪೋರ್ಟ್’ ವರದಿಯ ಪ್ರಕಾರ, ಜನವರಿ ಮೊದಲ ವಾರದಲ್ಲಿ ಮೆಗಾ ಹರಾಜು ನಡೆಯಲಿದೆ. ಪ್ರಸ್ತುತ 8 ಫ್ರಾಂಚೈಸಿಗಳು ಗರಿಷ್ಠ ತಲಾ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಡಿಸೆಂಬರ್ ಒಳಗಾಗಿ IPL ಆಡಳಿತ ಮಂಡಳಿಗೆ ಸಲ್ಲಿಸಬೇಕಾಗಿದೆ. ಬಳಿಕ ಹರಾಜಿಗೆ ಲಭ್ಯವಿರುವ ಆಟಗಾರರ ಪಟ್ಟಿಯಿಂದ ಮೂವರು ಆಟಗಾರರನ್ನು ಡಿಸೆಂಬರ್ 25ರ ಒಳಗಾಗಿ ಆಯ್ಕೆ ಮಾಡಲು ನೂತನ ಎರಡು ಫ್ರಾಂಚೈಸಿಗಳಿಗೆ ಅವಕಾಶ ನೀಡಲಾಗಿದೆ.

ಚೆನ್ನೈನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ IPL-2022 ಭಾರತದಲ್ಲಿಯೇ ಆಯೋಜನೆಗೊಳ್ಳಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದರು.

Join Whatsapp
Exit mobile version