ಇಂಟರ್ನೆಟ್ ಸ್ಥಗಿತ । ಸತತ ಮೂರನೇ ಬಾರಿಗೆ ಭಾರತಕ್ಕೆ ನಂಬರ್ ಒನ್ ಪಟ್ಟ !!
Prasthutha: March 4, 2021
ಒಟ್ಟು ಎಷ್ಟು ಬಾರಿ ಸ್ಥಗಿತಗೊಳಿಸಿವೆ ನಿಮಗೊತ್ತೇ?

2020ರಲ್ಲಿ ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ಬಾರಿ ಇಂಟರ್ನೆಟ್ ಸೇವೆಯನ್ನು ಸ್ಥಗಿತ ಮಾಡಿದ ದೇಶಗಳ ಪಟ್ಟಿಯಲ್ಲಿ ಭಾರತ ಪ್ರಥಮ ಸ್ಥಾನ ಪಡೆದುಕೊಂಡ ಕುಖ್ಯಾತಿಗೆ ಒಳಗಾಗಿದೆ. ಕಳೆದ ವರ್ಷ ಇಂಟರ್ನೆಟ್ ಸೇವೆಯನ್ನು ಭಾರತವು ಅತ್ಯಧಿಕವಾಗಿ ಸ್ಥಗಿತಗೊಳಿಸಿದೆ ಎಂದು ಡಿಜಿಟಲ್ ಹಕ್ಕುಗಳು ಮತ್ತು ಗೌಪ್ಯತೆಗಳಿಗೆ ಸಂಬಂಧಿಸಿದ ಸಂಸ್ಥೆಯೊಂದು ತನ್ನ ವರದಿಯಲ್ಲಿ ಪ್ರಕಟಿಸಿದೆ.
2020ರಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದ 29 ದೇಶಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ಕಳೆದ ವರ್ಷ ಇಂಟರ್ನೆಟ್ ಸೇವೆಗಳ ಸ್ಥಗಿತದ ಒಟ್ಟು 155 ಪ್ರಕರಣಗಳು ವರದಿಯಾಗಿದೆ. ಅದರ ಪೈಕಿ 109 ಪ್ರಕರಣಗಳು ಭಾರತದಲ್ಲಿ ಮಾತ್ರ ದಾಖಲಾಗಿವೆ ಎಂದು ವರದಿಗಳು ತಿಳಿಸಿದೆ.
ಹೀಗೆ ಸೇವೆ ಸ್ಥಗಿತಗೊಳಿಸುವುದರಲ್ಲಿ ಭಾರತ ಈ ಬಾರಿಯದ್ದೂ ಸೇರಿ ಸತತ ಮೂರನೇ ಬಾರಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ. ಹೆಚ್ಚಿನ ಸಂದರ್ಭದಲ್ಲಿ ಸರ್ಕಾರವು ಹೋರಾಟ ಮತ್ತು ಪ್ರತಿಭಟನೆಯನ್ನು ಹತ್ತಿಕ್ಕಲು ಇಂಟರ್ನೆಟ್ ಸ್ಥಗಿತ ಕ್ರಮಕ್ಕೆ ಮುಂದಾಗಿದೆ ಎಂದು ಎಕ್ಸೆಸ್ ನೌ ನಂತಹ ಡಿಜಿಟಲ್ ಹಕ್ಕುಗಳ ಸಂಸ್ಥೆಗಳು ವರದಿ ಮಾಡಿದೆ. ಭಾರತದಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ಸಂದರ್ಭ ಹಾಗೂ ಸಿಎಎ – ಎನ್ ಆರ್ ಸಿ ಕಾಯ್ದೆ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಮುಖವಾಗಿ ಇಂಟರ್ನೆಟ್ ಸೇವೆಯನ್ನು ತಡೆಹಿಡಿದಿತ್ತು.
