ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ: ಯಲಹಂಕ ವಾಯುಪಡೆ ನಿಲ್ದಾಣದ ವ್ಯಾಪ್ತಿಯಲ್ಲಿ ಮಾಂಸಾಹಾರ ಮಾರಾಟ ನಿಷೇಧಿಸಿದ ಬಿಬಿಎಂಪಿ

Prasthutha|

ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ವಾಯುಪಡೆ ನಿಲ್ದಾಣದ 10 ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಮಾಂಸ ಮತ್ತು ಮೀನು ಅಂಗಡಿಗಳು, ಮಾಂಸಾಹಾರಿ ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳನ್ನು ಜನವರಿ 30 ರಿಂದ ಫೆಬ್ರವರಿ 20 ರವರೆಗೆ ಮುಚ್ಚಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆದೇಶಿಸಿದೆ.

- Advertisement -

ಫೆಬ್ರವರಿ 13 ರಿಂದ 17 ರವರೆಗೆ ವಾಯುಪಡೆ ನಿಲ್ದಾಣದಲ್ಲಿ ನಡೆಯಲಿರುವ ಏರೋ ಇಂಡಿಯಾ ಪ್ರದರ್ಶನದ 14 ನೇ ಆವೃತ್ತಿಯ ಕಾರಣ ಈ ಆದೇಶ ಹೊರಡಿಸಲಾಗಿದೆ. ನಿಗದಿತ ಪ್ರದೇಶಗಳಲ್ಲಿ ಮಾಂಸಾಹಾರಿ ಭಕ್ಷ್ಯಗಳ ಬಡಿಸುವಿಕೆ ಮತ್ತು ಮಾರಾಟ ಎರಡನ್ನೂ ನಿಷೇಧಿಸಲಾಗಿದೆ.

ಈ ಆದೇಶದ ಉಲ್ಲಂಘಿಸಿದರೆ ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ಏರ್‌ಕ್ರಾಫ್ಟ್‌ ರೂಲ್ಸ್‌ 1937ರ ರೂಲ್‌ 91ರ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಯಲಹಂಕ ವಲಯದ ಬಿಬಿಎಂಪಿ ಜಂಟಿ ಆಯುಕ್ತರು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

- Advertisement -

‘‘ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಏರ್‌ ಶೋ ಯಶಸ್ವಿಗಾಗಿ ಎಲ್ಲ ಇಲಾಖೆಗಳು ಒಗ್ಗೂಡಿ ಕಾರ್ಯ ನಿರ್ವಹಿಸುತ್ತಿವೆ. ಈ ಹಿಂದೆ 150 ಇ-ಶೌಚಾಲಯಗಳನ್ನು ಅಳವಡಿಸಲಾಗಿತ್ತು. ಈ ಬಾರಿ 250 ಇ-ಶೌಚಾಲಯಗಳ ವ್ಯವಸ್ಥೆ ಮಾಡಲಾಗುತ್ತಿದೆ. ಸುತ್ತಮುತ್ತಲ ಕೆರೆಗಳಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ. ಭೂಭರ್ತಿ ಘಟಕಗಳಲ್ಲಿ ರಾತ್ರಿ ವೇಳೆ ಕೆಲಸ ಮಾಡಲಾಗುವುದು. ಮಣ್ಣು ಹೊದಿಸಿ, ದುರ್ವಾಸನೆ ಬಾರದಂತೆ ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ನಗರದಲ್ಲಿ ಶುಚಿತ್ವ ಕಾಪಾಡಿಕೊಂಡು ಸುಂದರ ವಾತಾವರಣ ನಿರ್ಮಿಸಲಾಗುವುದು,’’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ಏರ್ ಶೋ ಸಮಯದಲ್ಲಿ ಉಳಿದ ಆಹಾರ ಮತ್ತು ಮಾಂಸ ತ್ಯಾಜ್ಯವನ್ನು ತಿನ್ನುವ ಪಕ್ಷಿಗಳನ್ನು ಆಕಾಶದಿಂದ ದೂರವಿಡುವುದನ್ನು ಖಚಿತಪಡಿಸಿಕೊಳ್ಳಲು ನಾಗರಿಕ ಸಂಸ್ಥೆ ದ್ವೈವಾರ್ಷಿಕ  ಕಾರ್ಯಕ್ರಮದ ಕಾರಣದಿಂದಾಗಿ ನಿಷೇಧವನ್ನು ಹೊರಡಿಸಲಾಗಿದೆ.

Join Whatsapp