ನವದೆಹಲಿ : ಆಗಸ್ಟ್ 10 ರಿಂದ 15 ರವರೆಗೆ ಭಾರತದ ಸಮಾನ ಮನಸ್ಕರಿಂದ ಸಾಮಾಜಿಕ ಜಾಲತಾಣಗಳಲ್ಲಿ “ಮಾತಾಡಿ ಪ್ರಧಾನಿಗಳೇ ಮಾತನಾಡಿ” ಎಂಬ ಶೀರ್ಷಿಕೆಯಡಿಯಲ್ಲಿ ಅಭಿಯಾನವನ್ನು ಹಮ್ಮಿಕೊಂಡಿದೆ.
ಸ್ವಾತಂತ್ರ್ಯ ಉತ್ಸವದ ಅಂಗವಾಗಿ ಭಾರತದ ಪ್ರಧಾನಿ ಅವರ ಭಾಷಣಕ್ಕೆ ಪ್ರಧಾನಿ ಮೋದಿಯವರು ಸಾರ್ವಜನಿರಿಂದ ಅಭಿಪ್ರಾಯ ಕೇಳಿದ ಹಿನ್ನಲೆಯಲ್ಲಿ ಪ್ರಸಕ್ತ ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಪ್ರಧಾನಿ ಮೌನ ಮುರಿಯುವಂತಾಗಿಸುವ ನಿಟ್ಟಿನಲ್ಲಿ ಭಾರತೀಯ ಸಮಾನ ಮನಸ್ಕರಿಂದ ಈ ಅಭಿಯಾನವನ್ನು ಆಯೋಜಿಸಲಾಗಿದೆ ಎನ್ನಲಾಗಿದೆ.
ಅಭಿಯಾನದ ಭಾಗವಾಗಿ ವ್ಯಾಪಕವಾಗುತ್ತಿರುವ ದಲಿತರ ಮೇಲಿನ ದೌರ್ಜನ್ಯ, ದಲಿತ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆ, ಮುಸ್ಲಿಮರ ಮೇಲಿನ ಗುಂಪು ಹತ್ಯೆ, ಅಸೀಫಾ ಅತ್ಯಾಚಾರ-ಕೊಲೆ, ಕಾರ್ಮಿಕ- ರೈತ ವಿರೋಧಿ ನಿಲುವು, ಮಹಿಳೆಯರ ಮೇಲಿನ ನಿರಂತರ ಶೋಷಣೆ, ಹಥ್ರಾಸ್ ಘಟನೆ, ಪೆಗಾಸೆಸ್ ಗೂಢಚರ್ಯೆ, ಹಿಂದುತ್ವವಾದಿಗಳ ಅಟ್ಟಹಾಸ ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತಂತೆ ಪ್ರಧಾನಿ ಮೋದಿ ಯವರು ಸ್ವಾತಂತ್ರ್ಯದ ಭಾಷಣದಲ್ಲಿ ಉಲ್ಲೇಖಿಸುವಂತಾಗಲು ಈ ಅಭಿಯಾನದ ಉದ್ದೇಶವೆಂದು ಅಭಿಯಾನದ ಸಂಘಟಕರಲ್ಲೊಬ್ಬರಾಗಿರುವ ಕರ್ನಾಟಕ ವಿಧ್ಯಾರ್ಥಿ ಸಂಘಟನೆಗಳ ಒಕ್ಕೂಟದ ಸಂಚಾಲಕರಾದ ಸರೋವರ್ ಬೆಂಕಿಕೆರೆ ಅವರು ತಿಳಿಸಿದ್ದಾರೆ. ಮಾತ್ರವಲ್ಲದೆ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಕೂಡಾ ಅವರು ಸಾರ್ವಜನಿಕರನ್ನು ವಿನಂತಿಸಿದ್ದಾರೆ.