October 22, 2020
ಗಡ್ಡ ಬೆಳೆಸಿದ ಕಾರಣಕ್ಕೆ ಪೊಲೀಸ್ ಇನ್ ಸ್ಪೆಕ್ಟರ್ ಅಮಾನತು

ಅನುಮತಿಯಿಲ್ಲದೆ ಗಡ್ಡ ಬೆಳೆಸಿದ ಕಾರಣಕ್ಕಾಗಿ ಉತ್ತರ ಪ್ರದೇಶದಲ್ಲಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಓರ್ವರನ್ನು ಅಮಾನತುಗೊಳಿಸಲಾಗಿದೆ ಎಂದು ಐ.ಎ.ಎನ್.ಎಸ್ ವರದಿ ಮಾಡಿದೆ.
ಗಡ್ಡ ಬೋಳಿಸುವಂತೆ ಆಥವಾ ಗಡ್ಡ ಬೆಳೆಸಲು ಅನುಮತಿಯನ್ನು ಕೋರುವಂತೆ ಇಂತಝಾರ್ ಅಲಿಯವರಿಗೆ ಮೂರು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೆ ಅವರು ಅನುಮತಿಯನ್ನು ಕೋರಿಲ್ಲ ಮತ್ತು ಗಡ್ಡ ಬೆಳೆಸುವುದನ್ನು ಮುಂದುವರಿಸಿದ್ದಾರೆ.
ಪೊಲೀಸ್ ನಿಯಮದ ಪ್ರಕಾರ ಸಿಖ್ಖರು ಮಾತ್ರವೇ ಗಡ್ಡವನ್ನು ಬೆಳೆಸಲು ಅನುಮತಿಸಲಾಗಿದೆ ಮತ್ತು ಉಳಿದೆಲ್ಲಾ ಪೋಲೀಸರು ಗಡ್ಡವನ್ನು ಬೋಳಿಸಬೇಕಾಗಿದೆ ಎಂದು ಬಘ್ಪತ್ ಎಸ್.ಪಿ ಅಭಿಷೇಕ್ ಸಿಂಗ್ ಹೇಳಿದ್ದಾರೆ.
“ಯಾವುದೇ ಪೊಲೀಸ್ ಅಧಿಕಾರಿ ಗಡ್ಡವನ್ನು ಬಿಡಬೇಕಾದರೆ ಅನುಮತಿಯನ್ನು ಕೋರಬೇಕು. ಅನುಮತಿಯನ್ನೂ ಕೋರುವಂತೆ ಇಂತಝಾರ್ ಅಲಿ ಯವರಿಗೆ ಮತ್ತೆ ಮತ್ತೆ ಎಚರಿಕೆಯನ್ನು ನೀಡಲಾಗಿತ್ತು. ಆದರೆ ಅವರು ಅದನ್ನು ಪಾಲಿಸಲಿಲ್ಲ” ಎಂದು ಅವರು ತಿಳಿಸಿದ್ದಾರೆ.
ಅಲಿ ಕಳೆದ ಮೂರು ವರ್ಷಗಳಿಂದ ಬಘ್ಪತ್ ನಲ್ಲಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಾನು ಗಡ್ಡ ಬೆಳೆಸಲು ಅನುಮತಿ ಕೋರಿದ್ದು ಅದಕ್ಕೆ ಪ್ರತಿಕ್ರಿಯೆ ದೊರೆತಿರಲಿಲ್ಲ ಎಂದು ಇಂತಝಾರ್ ಅಲಿ ವರದಿಗಾರರ ಜೊತೆ ಪ್ರತಿಕ್ರಿಯಿಸಿದ್ದಾರೆ.