ಬೆಂಗಳೂರು: ಕಾಡಾನೆ ದಾಳಿಗೆ ಬಲಿಯಾಗಿದ್ದ ಕೇರಳ ವ್ಯಕ್ತಿ ಕುಟುಂಬಕ್ಕೆ 15 ಲಕ್ಷ ರೂ. ಕೊಟ್ಟಿದ್ದೀರಿ, ಇಲ್ಲಿ ಆನೆ ತುಳಿತಕ್ಕೆ ಸತ್ತರೆ 5 ಲಕ್ಷ ರೂಪಾಯಿ ಕೊಡುತ್ತೀರಿ. ಆದರೆ ರೈತರು ಪರಿಹಾರ ಕೇಳಿದರೆ ಕೊಡಲ್ಲ. ನನ್ನ ತೆರಿಗೆ ನನ್ನ ಹಕ್ಕು ಅನ್ನುವ ಬದಲು ನನ್ನ ತೆರಿಗೆ ಕಾಂಗ್ರೆಸ್ ಗೆ ಅಂತ ಬದಲು ಮಾಡಿಕೊಳ್ಳಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ನಡೆಸಲು ಆಗದೆ, ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ ರಾಜ್ಯ ಕಾಂಗ್ರೆಸ್ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೋರಾಟ ಮಾಡುತ್ತಿದೆ. ನಮ್ಮ ರಾಜ್ಯದ ಜನರ ಬೆವರಿನ ತೆರಿಗೆ ಹಣವನ್ನು ಪಕ್ಕದ ರಾಜ್ಯದವರಿಗೆ ಪರಿಹಾರ ಕೊಟ್ಟಿದ್ದೀರಿ. ನಮ್ಮ ರಾಜ್ಯದ ರೈತರಿಗೆ ಪರಿಹಾರ ಕೊಡಲು ನಿಮ್ಮ ಬಳಿ ಹಣ ಇಲ್ಲ. ಈ ರೀತಿ ಪರಿಹಾರ ಕೊಟ್ಟಿರುವುದು ಅತ್ಯಂತ ಖಂಡನಿಯ ಎಂದರು.
ಮಾನವೀಯತೆಯಿಂದ ಪರಿಹಾರ ಕೊಟ್ಟರೆ ಪರವಾಗಿಲ್ಲ. ಅವರ ಪಕ್ಷದ ನಾಯಕರನ್ನು ಓಲೈಕೆ ಮಾಡಲು ಈತರ ಮಾಡುವುದು ಸರಿಯಲ್ಲ. ಈ ರೀತಿ ಮಾಡಿ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಯಾಕೆ ಹೋರಾಟ ಮಾಡುತ್ತೀರಾ? ಓಲೈಕೆ ರಾಜಕಾರಣ ಮಾಡಲು ಈ ರೀತಿಯಾದ ಕೆಲಸ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದರು.