ಮಂಗಳೂರು: ಇನ್ ಸ್ಟಾಗ್ರಾಮ್ ನಲ್ಲಿ ಕಂಡ ಜಾಹೀರಾತುವೊಂದನ್ನ ನಂಬಿ ವ್ಯಕ್ತಿಯೋರ್ವರು ಹಣ ಕಳೆದುಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಶ್ರಿನಿವಾಸ್ ಎಂಬ ಹೆಸರಿನಲ್ಲಿ ಖಾತೆ ಹೊಂದಿರುವ ಆರೋಪಿಯು ತಾನು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ತನ್ನಲ್ಲಿರುವ ಹೋಂಡಾ ಡಿಯೋ ದ್ವಿಚಕ್ರ ವಾಹನದ ಅಗತ್ಯವಿಲ್ಲದೇ ಇರೋದರಿಂದ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನ ನಂಬಿದ ನಗರದ ವ್ಯಕ್ತಿಯೋರ್ವರು 18ಸಾವಿರ ರೂ. ಗೆ ದ್ವಿಚಕ್ರ ವಾಹನ ಖರೀದಿಸಲು ಮುಂದಾಗಿದ್ದಾರೆ. ಮುಂಗಡವಾಗಿ ಹಣ ಪಾವತಿಸುವಂತೆ ಆರೋಪಿಯು ತಿಳಿಸಿದ್ದರಿಂದ ದೂರುದಾರ ವ್ಯಕ್ತಿಯು ತನ್ನ ಸ್ನೇಹಿತ ಅನಿಲ್ ಎಂಬವರ ಗೂಗಲ್ ಪೇ ನಿಂದ 3ಸಾವಿರ ರೂ. ಅನ್ನು ಪಾವತಿಸಿರುತ್ತಾರೆ. ಇದಾದ ಕೆಲವೇ ಗಂಟೆಗಳಲ್ಲಿ ಅದೇ ಖಾತೆಯಿಂದ ಹಂತ ಹಂತವಾಗಿ ಒಟ್ಟು 51,300 ರೂ. ಹಣ ವರ್ಗಾವಣೆ ಆಗಿರುವುದು ದೂರುದಾರರ ಗಮನಕ್ಕೆ ಬಂದಿದೆ.
ಈ ಕುರಿತು ಮಂಗಳೂರು ನಗರ ಸೈಬರ್ ಠಾಣೆಯಲ್ಲಿ ಮೋಸ ಹೋದ ವ್ಯಕ್ತಿಯು ದೂರು ದಾಖಲಿಸಿದ್ದಾರೆ.