Home ಟಾಪ್ ಸುದ್ದಿಗಳು ಇನ್ಸ್ ಪೆಕ್ಟರ್ ನಂದೀಶ್ ಸಾವು ಪ್ರಕರಣ: ಪೊಲೀಸ್ ಆಯುಕ್ತರ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು

ಇನ್ಸ್ ಪೆಕ್ಟರ್ ನಂದೀಶ್ ಸಾವು ಪ್ರಕರಣ: ಪೊಲೀಸ್ ಆಯುಕ್ತರ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು

ಬೆಂಗಳೂರು: ಕೆ.ಆರ್. ಪುರಂ ಪೊಲೀಸ್ ಇನ್ಸ್ ಪೆಕ್ಟರ್ ನಂದೀಶ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.

ನಗರದ ಜಾನ್ ಪಾಲ್ ಎಂಬುವವರು ದೂರು ದಾಖಲಿಸಿ ಇನ್ಸ್ ಪೆಕ್ಟರ್ ನಂದೀಶ್ ಸಾವಿಗೆ ಪ್ರತಾಪ್ ರೆಡ್ಡಿ ಅವರು ಪರೋಕ್ಷವಾಗಿ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜಕೀಯ ಒತ್ತಡ ಮತ್ತು ದ್ವೇಷವೇ ಇನ್ಸ್ ಪೆಕ್ಟರ್ ಅಮಾನತಿಗೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ರಾಜಕಾರಣಿಯೊಬ್ಬರನ್ನು ಖುಷಿಪಡಿಸಲು ನಂದೀಶ್ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಇದರಿಂದ ಖಿನ್ನತೆಗೆ ಒಳಗಾಗಿದ್ದ ನಂದೀಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಗರದ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ 100ಕ್ಕೂ ಅಧಿಕ ಪಬ್‌ಗಳಿವೆ. ಇಂತಹ ಪಬ್ ಗಳು ಅವಧಿಯನ್ನು ಮೀರಿ ಕಾರ್ಯನಿರ್ವಹಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸ್ ಕಮಿಷನರ್ ಅವರು ಅಧಿಕಾರ ದುರುಪಯೋಗಪಡಿಸಿ ನಂದೀಶ್ ಅವರನ್ನು ಅಮಾನತು ಮಾಡಿದ್ದಾರೆ. ಹೀಗಾಗಿ ಸಮಗ್ರ ತನಿಖೆ ನಡೆಸುವಂತೆ ಡಿಜಿಪಿಗೆ ನಿರ್ದೇಶನ ನೀಡಬೇಕು. ಪೊಲೀಸ್ ಕಮಿಷನರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

Join Whatsapp
Exit mobile version