Home ಟಾಪ್ ಸುದ್ದಿಗಳು ಕದ್ದ ಚಿನ್ನ ಎಲ್ಲಿ ಮಾರಬೇಕೆಂದರಿಯದೆ ಗುಜರಿಗೆ ಹಾಕಿದ್ದ ‘ಮುಗ್ಧ’ ಕಳ್ಳನ ಬಂಧನ !

ಕದ್ದ ಚಿನ್ನ ಎಲ್ಲಿ ಮಾರಬೇಕೆಂದರಿಯದೆ ಗುಜರಿಗೆ ಹಾಕಿದ್ದ ‘ಮುಗ್ಧ’ ಕಳ್ಳನ ಬಂಧನ !

ಬೆಂಗಳೂರು: ಕಳವು ಮಾಡಿದ ಚಿನ್ನವನ್ನು ಅದರ ಮೌಲ್ಯದ ಅರಿವಿಲ್ಲದೇ ಗುಜರಿಗೆ ಹಾಕಿದ ಮುಗ್ಧ ಕಳ್ಳನೊಬ್ಬನನ್ನು ಯಶವಂತಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಪಶ್ಚಿಮ ಬಂಗಾಳ ಮೂಲದ ಸುಬ್ರತೋ ಮಂಡಲ್ ಅಲಿಯಾಸ್ ಗುಜರಿ ಬಂಧಿತ ಆರೋಪಿಯಾಗಿದ್ದು ಆತನಿಂದ ನಗದು ಸೇರಿ 7 ಲಕ್ಷ ಮೌಲ್ಯದ 130 ಗ್ರಾಂ ಚಿನ್ನವನ್ನು ಜಪ್ತಿ ಮಾಡಲಾಗಿದೆ.
ಪಶ್ಚಿಮ ಬಂಗಾಳದಿಂದ ಉದ್ಯೋಗ ಅರಸಿ 6 ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿಯು ಸುಲಭವಾಗಿ ಹಣಗಳಿಸಲು ಕಳ್ಳತನವನ್ನು ಕಸುಬಾಗಿಸಿಕೊಂಡಿದ್ದು ಯಶವಂತಪುರದ ಮತ್ತಿಕೆರೆಯಲ್ಲಿ ಕೈಚಳಕ ತೋರಿಸುತ್ತಿದ್ದ.


ಕಳವು ಮಾಡಿದ ಮಾಲನ್ನು ಗುಜರಿಗೆ ಹಾಕಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಆ ಆಸಾಮಿಗೆ ಅದೊಂದು ದಿನ ಕಬ್ಬಿಣದ ನಲ್ಲಿ (ಕೊಳಾಯಿ) ಮೇಲೆ ಕಣ್ಣು ಬಿದ್ದಿದೆ.
ಅದನ್ನು ಕಳವು ಮಾಡಲು ಮನೆಗೆ ಒಳ ಹೋಗಿದ್ದಾಗ ಒಂದಷ್ಟು ಹಣವೂ ಸಿಕ್ಕಿದೆ. ಜೊತೆಗೆ ಚಿನ್ನಾಭರಣಗಳನ್ನು ಕದ್ದಿದ್ದಾನೆ. ಬಂಗಾರ ಸಿಕ್ಕಿದ ಖುಷಿಯಲ್ಲಿ ಹೊರಬಂದಿದ್ದಾನೆ.
ಕಳವು ಮಾಡಿದ್ದ ಚಿನ್ನವನ್ನು ಎಲ್ಲಿ ಮಾರಬೇಕು ಎಂದು ತಿಳಿಯದ ಸುಬ್ರತೋ, ಅದನ್ನು ಸೀದಾ ಹೊತ್ತೊಯ್ದು ಗುಜರಿಗೆ ಹಾಕಿಬಿಟ್ಟಿದ್ದಾನೆ. 7 ಲಕ್ಷ ರೂಪಾಯಿ ಮೌಲ್ಯದ 130 ಗ್ರಾಂ ಚಿನ್ನವನ್ನು ಗುಜರಿಗೆ ಹಾಕಿ ಬಡಪಾಯಿ ಕೇವಲ 30 ಸಾವಿರ ರೂ ಪಡೆದಿದ್ದ.


ಮನೆಗಳವು ಪ್ರಕರಣ ದಾಖಲಿಸಿದ್ದ ಯಶವಂತಪುರ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿ ಸುಬ್ರತೋ ಮಂಡಲ್ ಅಲಿಯಾಸ್ ಗುಜರಿಯನ್ನು ಬಂಧಿಸಿ 130 ಗ್ರಾಂ ಚಿನ್ನ ಮತ್ತು ನಗದು ಜಪ್ತಿ ಮಾಡಿ ಜೈಲಿಗಟ್ಟಿದ್ದಾರೆ.

Join Whatsapp
Exit mobile version