ಬೆಂಗಳೂರು: ನಮ್ಮ ರಾಜ್ಯಕ್ಕೆ ತೆರಿಗೆ ವಿಚಾರದಲ್ಲಿ ಮಾತ್ರವಲ್ಲ, ನೀರಿನ ಸಮಸ್ಯೆಯ ವಿಚಾರಗಳಲ್ಲಿಯೂ ಕೇಂದ್ರ ಸರಕಾರದಿಂದ ಅನ್ಯಾಯವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಪ್ರಚಾರಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ನಾವು ಕೆಲ ಪ್ರಶ್ನೆಗಳನ್ನ ಕೇಳುತ್ತೇವೆ. ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕ. ಹಾಗೆಯೇ ಕೇಂದ್ರದ ಅತಿ ಕಡಿಮೆ ಅನುದಾನ ಬರೋದು ಕರ್ನಾಟಕಕ್ಕೆ.. ನಮ್ಮ ತೆರಿಗೆ ಹಣ ಹಾಗೂ ನಮ್ಮ ರಾಜ್ಯದಿಂದ ಎಂಪಿಗಳನ್ನು ತಗೆದುಕೊಳ್ಳುತ್ತಾರೆ. ಆದ್ರೆ ನಮ್ಮನ್ನು ಕಡೆಗಣಿಸುತ್ತಿದ್ದಾರೆ. ಕರ್ನಾಟಕಕ್ಕೆ ತೆರಿಗೆ ಕಡಿಗಣನೆ ಅಲ್ಲದೇ, ನೀರಿನ ಸಮಸ್ಯೆಯಲ್ಲೂ ನ್ಯಾಯ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಅತಿ ಹೆಚ್ಚು ಖುಷ್ಕಿ ಪ್ರದೇಶದ ಜಮೀನು ಹೊಂದಿರುವುದು ಕರ್ನಾಟಕ ಮಳೆ ಮೇಲೆ ಹೆಚ್ಚು ಅವಲಂಬಿತ ರಾಜ್ಯವಾಗಿದೆ. ಕೃಷಿಗಾಗಿ ಅತಿಹೆಚ್ಚು ಮಳೆ ಮತ್ತು ನದಿ ನೀರಿನ ಮೇಲೆ ಅವಲಂಬಿತವಾಗಿರುವ ರಾಜ್ಯಕ್ಕೆ ನದಿ ನೀರಿನ ವಿಚಾರದಲ್ಲೂ ಕೇಂದ್ರ ಅನ್ಯಾಯ ಮಾಡಿದೆ. ಪ್ರಧಾನಿ ಮೋದಿಯವರು ನಾಳೆ ರಾಜ್ಯಕ್ಕೆ ಬರ್ತಿದ್ದಾರೆ. ಅವರಿಗೆ ನಾವು ಕೆಲ ಪ್ರಶ್ನೆಗಳನ್ನು ಕೇಳ್ತಿದ್ದೇವೆ ಅದಕ್ಕೆ ಅವರು ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ನಾಳೆ ನೀವು ಭದ್ರಾ ಯೋಜನೆಗೆ ಹಣ ಘೋಷಣೆ ಮಾಡ್ತೀರಾ? ಇಲ್ಲ ಅಂದ್ರೆ ನಾವು ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದೇವೆ, ಮೂರು ನಾಮ ಹಾಕಿದ್ದೇವೆ ಅಂತ ಸಾರ್ವಜನಿಕವಾಗಿ ಒಪ್ಪಿಕೊಳ್ಳಿ 2023ರ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಭದ್ರಾ ಯೋಜನೆಗೆ 5,300 ಕೋಟಿ ಘೋಷಣೆ ಮಾಡಲಾಗಿತ್ತು. ಯೋಜನೆ ಘೋಷಣೆ ಮಾಡಿದರೂ ಯಾಕೆ ಹಣ ಕೊಟ್ಟಿಲ್ಲ, ಇದಕ್ಕೆ ಉತ್ತರಿಸಿ. ರಾಜ್ಯ ಸರ್ಕಾರದಿಂದ ಭದ್ರಾ ಯೋಜನೆಯ ಹಣ ಬಿಡುಗಡೆಗೆ ಪತ್ರ ಬರೆದರು ಉತ್ತರವಿಲ್ಲ. ರಾಜ್ಯದ ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಜಲ ಸಂಪನ್ಮೂಲ ಸಚಿವರನ್ನು ಭೇಟಿಯಾದರೂ ಹಣ ನೀಡಲಿಲ್ಲ. ಸ್ವತಃ ಬಿಜೆಪಿ ಸಚಿವ ನಾರಾಯಣಸ್ವಾಮಿ ಪತ್ರ ಬರೆದರೂ ಸಹ ಭದ್ರಾ ಯೋಜನೆಗೆ ಹಣ ಕೊಡಲಿಲ್ಲ. ಯೋಜನೆ ಘೋಷಣೆ ಮಾಡಿ ಯಾಕೆ ನಯಾ ಪೈಸಾ ಕೊಡಲಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಈಗಾಗಲೇ ಮಹದಾಯಿ ನದಿ ನೀರು ಹಂಚಿಕೆಯಾಗಿದೆ. ಆದರೆ, ಈ ಯೋಜನೆಗೆ ಕೇಂದ್ರ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಮಹದಾಯಿ ಯೋಜನೆ ಕೆಲಸ ಮಾಡಲು ಅನುಮತಿ ಕೊಟ್ಟಿಲ್ಲ. ನಾಲ್ಕು ವರ್ಷಗಳಿಂದ ಅನುಮತಿ ಕೊಟ್ಟಿಲ್ಲ. ಈ ಮೂಲಕ ನಮ್ಮ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರನ್ನ ತಪ್ಪಿಸಿದೆ. ನಮ್ಮ ರಾಜ್ಯದ ಕಿತ್ತೂರು ಕರ್ನಾಟಕ ಭಾಗದ ರೈತರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂಬ ದುರುದ್ದೇಶದಿಂದ ಕೇಂದ್ರ ಸರ್ಕಾರದ ಪರಿಸರ ಇಲಾಖೆ ಒಂದು ಅನುಮತಿಗಾಗಿ ನಾಲ್ಕು ವರ್ಷಗಳಿಂದ ತಡೆ ಹಿಡಿದಿದ್ದಾರೆ. ನಾಳೆ ಮೋದಿಯವರು ಇದಕ್ಕೆ ಉತ್ತರ ಕೊಡಲಿ ಎಂದು ಆಗ್ರಹಿಸಿದರು.