ಸಂಘಪರಿವಾರದಿಂದ ಜಿಲ್ಲೆಯಲ್ಲಿ ಮುಂದುವರಿದ ಸರಣಿ ಗುಂಪು ಹಿಂಸೆ | ದುಷ್ಕರ್ಮಿಗಳ ಹೆಡೆಮುರಿ ಕಟ್ಟದಿದ್ದರೆ ಬೀದಿಗಿಳಿದು ಹೋರಾಟ : ಪಾಪ್ಯುಲರ್ ಫ್ರಂಟ್ ಎಚ್ಚರಿಕೆ

Prasthutha|

ಮಂಗಳೂರು.ಎ.2: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಸಂಘಪರಿವಾರದ 50ಕ್ಕೂ ಅಧಿಕ ಮಂದಿ ದುಷ್ಕರ್ಮಿಗಳು ಇಬ್ಬರು ಅಲ್ಪಸಂಖ್ಯಾತ ವ್ಯಕ್ತಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮರುದಿನವೇ ಮಂಗಳೂರಿನ ಪಂಪ್ ವೆಲ್ ನಲ್ಲಿ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಸ್ವಿದ್ ಅನ್ವರ್ ಮುಹಮ್ಮದ್ ಎಂಬ ಯುವಕನ ಮೇಲೆ ಸಂಘಪರಿವಾರದ ಗೂಂಡಾ ಗುಂಪು ನಡೆಸಿರುವ ಅನೈತಿಕ ಪೋಲಿಸ್ ಗಿರಿ ಆಘಾತಕಾರಿ ವಿಷಯವಾಗಿದೆ. ಜನನಿಭಿಡ ಪ್ರದೇಶ ಪಂಪ್ ವೆಲ್ ನಲ್ಲಿ ಸಂಘಪರಿವಾರ ನಡೆಸಿರುವ ಹಲ್ಲೆ ಜಿಲ್ಲೆಯ ಪೋಲಿಸ್ ಇಲಾಖೆ ಮತ್ತು ಸಾಮರಸ್ಯ ಬಯಸುವ ಜನರಿಗೆ ಸವಾಲಾಗಿದೆ. ಈ ಸವಾಲುಗಳನ್ನು ಎದುರಿಸಲು ಜಿಲ್ಲೆಯ ಪ್ರಜ್ಞಾವಂತ ಜನರು ಕಾರ್ಯಪ್ರವೃತ್ತರಾಗಬೇಕಿದೆ. ಆದ್ದರಿಂದ ಜಿಲ್ಲೆಯ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿರುವ ಸಂಘಪರಿವಾರದ ದುಷ್ಕರ್ಮಿಗಳ ಮೇಲೆ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ತನ್ನ ಕರ್ತವ್ಯ ನಿಭಾಯಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಒತ್ತಾಯಿಸಿದೆ.

- Advertisement -

ಕಾನೂನಿನ ಭಯ ಇಲ್ಲದ ಕಾರಣ ಸಂಘಪರಿವಾರದ ದುಷ್ಕರ್ಮಿಗಳು ಜಿಲ್ಲೆಯಲ್ಲಿ ಗುಂಪು ಹಿಂಸೆ ಘಟನೆಗಳು ಮುಂದುವರಿಸುತ್ತಿರುವುದು ಕಂಡುಬರುತ್ತಿದೆ. ದೊಣ್ಣೆ, ಕಲ್ಲುಗಳಿಂದ ಮಾರಾಣಾಂತಿಕ ಹಲ್ಲೆ ನಡೆಸಿ ಕ್ರೌರ್ಯ ಮೆರೆದ ಬೆಳ್ತಂಗಡಿ ಘಟನೆಗೆ ಸಂಬಂಧಿಸಿ ದುಷ್ಕರ್ಮಿಗಳ ವಿರುದ್ಧ ದುರ್ಬಲ ಸೆಕ್ಷನ್ ಅಡಿಯಲ್ಲಿ ಮೊಕದ್ದಮೆ ದಾಖಲಿಸಿರುವುದು ಸಂಘಪರಿವಾರದ ದುಷ್ಕರ್ಮಿಗಳಿಗೆ ಇನ್ನಷ್ಟು ಆಕ್ರಮಣ, ದಾಳಿ ನಡೆಸಲು ಪರೋಕ್ಷ ಸಹಕಾರಿಯಾಗುವಂತಾಗಿದೆ. ಆದ್ದರಿಂದ ಜಿಲ್ಲೆಯ ಸಾಮರಸ್ಯ ಕದಡಲು ಪ್ರಯತ್ನಿಸುತ್ತಿರುವ ಸಂಘಪರಿವಾರದ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಜರಗಿಸಬೇಕು. ಮಾತ್ರವಲ್ಲ ಪ್ರಚೋದನಕಾರಿ ಭಾಷಣ, ಹಲ್ಲೆಗಳಿಂದ ಜಿಲ್ಲೆಯ ಸಾಮರಸ್ಯ ಕದಡಲು ಪ್ರಯತ್ನಿಸುತ್ತಿರುವ ಸಂಘಪರಿವಾರದ ವಿರುದ್ಧ ನಾಗರಿಕ ಸಮಾಜ ಒಟ್ಟಾಗಿ ಪ್ರತಿರೋಧಿಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾಧ್ಯಕ್ಷ  ಇಜಾಝ್ ಅಹ್ಮದ್ ಪ್ರಕಟಣೆಯ ಮೂಲಕ ಕರೆ ನೀಡಿದ್ದಾರೆ.

Join Whatsapp